ನವದಂಪತಿಗಳ ಸಮಾವೇಶ-2018

ಮಂಗಳೂರು: ಇದೇ ಅಕ್ಟೋಬರ್ ತಿಂಗಳ 21 ರಂದು ಭಾನುವಾರ ಅಪರಾಹ್ನ 2 ಗಂಟೆಯಿಂದ ನಗರದ ಸಿ.ವಿ.ನಾಯಕ್ ಸಭಾಂಗಣದಲ್ಲಿ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಮಾಜದಲ್ಲಿ ಮೊದಲಬಾರಿಗೆ “ನವದಂಪತಿಗಳ ಸಮಾವೇಶ -2018” ನ್ನು ಆಯೋಜಿಸಲಾಗಿತ್ತು.

ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಆಸಕ್ತಿ ಪೂರ್ಣವಾದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಅಪೂರ್ವವಾಗಿತ್ತು. ನವದಂಪತಿಗಳು ಹಾಗೂ ವೈವಾಹಿಕ ಜೀವನದ ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡ ಸಮಾಜದ ಹಿರಿಯ ದಂಪತಿಗಳು ಸಮಾರಂಭದ ಪ್ರಮುಖ ಆಕರ್ಷಣೆಯಾಗಿದ್ದರು.

    ಭಾರತೀಯ ಸಾಂಪ್ರದಾಯಿಕ ಶೈಲಿಯಲ್ಲಿ ನವದಂಪತಿಗಳನ್ನು ಹಾಗೂ ಹಿರಿಯ ದಂಪತಿಗಳನ್ನು ಸುವಾಸಿನಿಯರು ತಿಲಕವಿಟ್ಟು, ಹೂಮುಡಿಸಿ, ಆರತಿ ಎತ್ತಿ ಸ್ವಾಗತಿಸಿದ್ದೂ ಕೂಡ ವಿಶೇಷವಾಗಿತ್ತು.

    ಬೊಗಸೆಯಲ್ಲಿ ಹಿಡಿದಿಟ್ಟ ನೀರಂತೆ. ಬಸಿದು ಹೋಗುವ ಮುನ್ನ ಬಳಸಬೇಕು……………………….

    ಪ್ರತಿಕ್ಷಣ ವ್ಯರ್ಥವಾಗದಂತೆ” ಎನ್ನುತ್ತಾ ಪ್ರಸ್ತುತ ಸಮಾಜದಲ್ಲಿ ವಿವಾಹ ಬಂಧನದ ಅಗತ್ಯತೆ ಹಾಗೂ ಅದರ ನಿರ್ವಹಣೆ, ಹೊಂದಾಣಿಕೆಯ ಬದುಕಿನ ಮೇಲೆ ಬೆಳಕು ಚೆಲ್ಲಿದರು. ‘ಇಂದು ನವ ಯುವ ದಂಪತಿಗಳು ಪಾಶ್ಚಾತ್ಯ ಜೀವನ ಶೈಲಿಯತ್ತ ಮಾರುಹೋಗುತ್ತಿರುವುದರಿಂದಾಗಿ ಹಾಗೂ ಆರ್ಥಿಕ ಸಬಲತೆಯ ಪ್ರಭಾವದಿಂದಾಗಿ ಸಣ್ಣ-ಪುಟ್ಟ ವಿಷಯಗಳಲ್ಲಿ ಭಿನ್ನಾಭಿಪ್ರಾಯವೇರ್ಪಟ್ಟು ಪರಸ್ಪರ ಬೇರ್ಪಡುವ ವಿದ್ಯಾಮಾನಗಳು ಹೆಚ್ಚುತ್ತಿರುವುದನ್ನು  ಕಾಣಬಹುದು. ಇಂತಹ ಘಟನೆಗಳಿಗೆ ಸರಿಯಾದ ಉತ್ತರ ಕೇವಲ-ಹೊಂದಾಣಿಕೆಯ ಬದುಕು’, ಈ ನಿಟ್ಟಿನಲ್ಲಿ ಶುಭವಿವಾಹ ವೇದಿಕೆಯು ‘ನವವಿವಾಹಿತರ ಸಮಾವೇಶ’ದ ಆಯೋಜನೆಯನ್ನು ಕೈಗೆತ್ತಿಕೊಂಡಿತು ಎಂದು ತಿಳಿಸಿದರು.

    ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರು ಡಾ|| ಪ್ರಭಾಕರ್ ಭಟ್ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಡಾ|| ಕಮಲಾ ಭಟ್‍ರವರು ಆಗಮಿಸಿದ್ದು ಪದಾಧಿಕಾರಿಗಳ ಹಾಗೂ ಹಿರಿಯರ ಉಪಸ್ಥಿತಿಯಲ್ಲಿ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.

    ನಂತರ ಆಗಮಿಸಿದ ಎಲ್ಲಾ ನವದಂಪತಿಗಳು ಪರಸ್ಪರ ಪರಿಚಯವನ್ನು ಸಭೆಗೆ ನೀಡಿದಾಗ ಪದಾಧಿಕಾರಿಗಳು ಅವರಿಗೆ ಸ್ಮರಣಿಕೆಗಳನ್ನಿತ್ತು ಶುಭ ಹಾರೈಸಿದರು.

    ಸಭೆಯಲ್ಲಿ ಅತ್ಯಂತ ಮಾರ್ಮಿಕವಾದ ಸಂದರ್ಭವೆಂದರೆ ವೈವಾಹಿಕ ಜೀವನದ ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡ ಸುಮಾರು 17 ಹಿರಿಯ ದಂಪತಿಗಳಿಗೆ ಪೇಟ ತೊಡಿಸಿ, ಶಾಲು ಹೊದಿಸಿ, ಫಲಪುಷ್ಪ ಕಾಣಿಕೆಗಳನ್ನಿತ್ತು, ಸನ್ಮಾನಿಸಿ ಅವರಿಂದ ಆಶೀರ್ವಾದ ಪಡೆದದ್ದು “ಹೊಸಚಿಗುರು-ಹಳೆಬೇರು ಕೂಡಿರಲು ಮರ ಸೊಬಗು” ಎಂಬ ಡಿವಿಜಿ ಯವರ “ಮಂಕುತಿಮ್ಮನ ಕಗ್ಗ”ದ ನುಡಿಯನ್ನು ಪ್ರಾಸ್ತಾವಿಕ ಭಾಷಣದಲ್ಲಿ ಪ್ರಸ್ತಾಪಿಸಿದ್ದು ಈ ಸಂದರ್ಭಕ್ಕೆ ಹೇಳಿ ಮಾಡಿಸಿದಂತಿತ್ತು.

    ಹಿರಿಯರ ಸನ್ಮಾನದ ನಂತರ ಸಮಾರಂಭದ ಮುಖ್ಯ ಅತಿಥಿಗಳು ಹಾಗೂ ಪ್ರಮುಖ ಭಾಷಣಕಾರರಾಗಿ ಆಗಮಿಸಿದ್ದ ಡಾ|| ಪ್ರಭಾಕರ್ ಭಟ್ ರವರು ‘ಭಾರತೀಯ ವಿವಾಹ ಪದ್ಧತಿ ಹಾಗೂ ಸಹಬಾಳ್ವೆ’ ಯ ಇಂದಿನ ಸ್ಥಿತಿಗತಿಗಳ ಬಗ್ಗೆ ನಿರರ್ಗಳವಾಗಿ ತಮ್ಮ ಚಿಂತನೆಗಳನ್ನು ನೆರೆದ ಸಭಿಕರಿಗೆ ಮನ ಮುಟ್ಟುವಂತೆ ವಿವರಿಸಿದರು.

        ಅವರು ತಮ್ಮ ಭಾಷಣದಲ್ಲಿ ‘ಪ್ರತಿಯೊಂದು ದೇಶ ಹಾಗೂ ಪ್ರದೇಶಗಳು ತಮ್ಮದೇ ಆದ ಆಚಾರ ವಿಚಾರಗಳನ್ನು ಹೊಂದಿದ್ದು ಉದಾಹರಣೆಗೆ ಅಮೇರಿಕ ಹಾಗೂ ಪಾಶ್ಚಿಮಾತ್ಯ ದೇಶಗಳು ತನ್ನ ಆರ್ಥಿಕತೆಯ ಆಧಾರದ ಮೇಲೆ, ಹಾಗೆಯೇ ಇಸ್ಲಾಂ ರಾಷ್ಟ್ರಗಳು ಮತೀಯ ಆಧಾರದ ಮೇಲೆ ತಮ್ಮ ಸಮಾಜವನ್ನು ಬೆಳೆಸಿದ್ದರೆ, ನಮ್ಮ ಭಾರತೀಯ ಚಿಂತನೆ ಎಲ್ಲಕ್ಕಿಂತ ಭಿನ್ನವಾಗಿದ್ದು ಅದು “ಧರ್ಮಾಧಾರಿತ ಆಚರಣೆ” ಅಡಿಪಾಯದ ಮೇಲೆ ಅಭಿವೃದ್ಧಿ ಹೊಂದಿದ್ದು ಹಾಗಾಗಿ ಹಿಂದೂ ಸಂಸ್ಕೃತಿಯು ಪ್ರತೀ ವ್ಯಕ್ತಿಯ ಆದಿಯಿಂದ ಅಂತ್ಯದವರೆಗೆ “ಶೋಡಷ ಸಂಸ್ಕಾರ” ಎಂಬ ಆಚರಣೆಯನ್ನು ಅಳವಡಿಸಿದೆ. ಈ 16 ಸಂಸ್ಕಾರಗಳಲ್ಲಿ ಪ್ರಮುಖವಾದದ್ದು “ವಿವಾಹ”. ವಿವಾಹವನ್ನು ‘ಬಂಧನ’ ಎಂಬುದಾಗಿ ಹೇಳುವುದರಲ್ಲೂ ಅರ್ಥವಿದೆ. ಈ ಬಂಧನಕ್ಕೊಳಗಾಗುವವರೆಗೆ ಗಂಡು-ಹೆಣ್ಣು “ನಾನು” ಆಗಿದ್ದವರು ನಂತರ ‘ನಾವು’ ಗಳಾಗುತ್ತಾರೆ. ಅಲ್ಲಿ ‘ಸ್ವಾರ್ಥ’ ವನ್ನು ಬಿಟ್ಟು ‘ನಿಸ್ವಾರ್ಥ’ ಬೆಳೆದು, ಎರಡೂ ಜೀವಗಳು ಬೆಸೆದುಕೊಳ್ಳುತ್ತಾ ಹೋಗುತ್ತದೆ. ಇಲ್ಲಿ ವ್ಯಕ್ತಿ, ಸಮಾಜವಾಗಿ ಬಿಡುತ್ತಾನೆ. ಇದು ನರನನ್ನು  ನಾರಾಯಣತ್ವದ ಕಡೆಗೊಯ್ಯುವ ಮಾರ್ಗ’ ಎಂದು ಹೇಳಿದರು.

    17 ಮಂದಿ ಹಿರಿಯ ದಂಪತಿಗಳನ್ನು ಸನ್ಮಾನಿಸಿದ ಸಂಘಟಕರ ಸುವಿಚಾರವನ್ನು ಶ್ಲಾಘಿಸುತ್ತಾ, ತಮ್ಮ ವೈವಾಹಿಕ ಜೀವನದ 50ಕ್ಕೂ ಮಿಕ್ಕು ಸಂವತ್ಸರಗಳನ್ನು ಕಂಡಿರುವ ಈ ಹಿರಿಯ ಜೀವಗಳು ವೃತ, ಸಂಕಲ್ಪ ಹಾಗೂ ಅಗ್ನಿ ಸಾಕ್ಷಿಯಾಗಿ ಸಪ್ತಪದಿ ತುಳಿದು ಆಜೀವ ಪರ್ಯಂತ “ನಾನು ಮತ್ತು ನೀನು, ನಾವಾಗಿ ಬಾಳೋಣ” ಎಂಬ ಪ್ರತಿಜ್ಞೆ ಮಾಡಿ ತಮ್ಮ ಜೀವನದ ಹಾದಿಯನ್ನು ಸವೆಸಿದ್ದಾರೆ. ತಮ್ಮ ಜೀವನದ ಹಾದಿಯಲ್ಲಿ ಅವರು ತುಳಿದ ಹೂವು-ಮುಳ್ಳುಗಳು ಹಲವಾರು. ಅವುಗಳಿಂದ ಜೀವನ ಗಟ್ಟಿಯಾಗುತ್ತಾ, ಅನುಭವಗಳನ್ನು ಪಡೆಯುತ್ತಾ ಬದುಕನ್ನು ಸಾರ್ಥಕ್ಯಗೊಳಿಸಿಕೊಂಡಿದ್ದಾರೆ.     ‘ವಿವಾಹ’ ಎಂಬುದು ಕೇವಲ ದೈಹಿಕ ಸುಖಕ್ಕೆ ಮಾತ್ರವಲ್ಲ, ಎರಡು ಹೃದಯಗಳ ಅನುಬಂಧದ ಆಂತರಿಕ ಸುಖದ ಅನುಭೂತಿ.  ವಿವಾಹ ಬಂಧನ ಭಾರತದಲ್ಲಿ ಜಾತ್ಯಾತೀತ, ಏಕೆಂದರೆ ಭಾರತೀಯತೆಯನ್ನು ಎಲ್ಲಾ ಧರ್ಮದ ವಿವಾಹದಲ್ಲೂ ಕಾಣಬಹುದು ಎಂದರು.

    ಹಿಂದೂ ಸಮಾಜದಲ್ಲಿ ವಿವಾಹದ ಮಹತ್ವವನ್ನು ತಿಳಿಸುತ್ತಾ, ವಿವಾಹವು ಪ್ರಮುಖವಾಗಿ ಎರಡು ಕಾರಣಗಳಿಗಾಗಿ ಅವಶ್ಯಕ. ಒಂದು ‘ಅರ್ಧಾಂಗಿ’ ಅಂದರೆ ನನ್ನ ದೇಹದ, ಜೀವನದ ಅರ್ಧಭಾಗ ಅವಳು, ಜೀವನ ಯಜ್ಞದಲ್ಲಿ ಧರ್ಮಕಾರ್ಯವನ್ನು ಮುಂದುವರಿಸಲು ‘ಅರ್ಧಾಂಗಿ’ ಇದ್ದಾಗ ಮಾತ್ರ ಸಾಧ್ಯ. ಎರಡನೆಯದಾಗಿ ‘ಪ್ರಜಾಭಿವೃದ್ಧಿ’ ಅರ್ಥಾತ್ ಸಂತಾನೋತ್ಪತ್ತಿ. ನಮ್ಮ ಸಂತಾನ ಈ ಜಗತ್ತಿನಲ್ಲಿ ಧರ್ಮಕಾರ್ಯಗಳನ್ನು ನೆರವೇರಿಸುವುದರಲ್ಲಿ ಸಹಾಯಕವಾಗಬೇಕು ಹಾಗಾಗಿ ಸಂತಾನೋತ್ಪತ್ತಿ ಅವಶ್ಯಕ. ಸಂತಾನ ಭಾಗ್ಯವನ್ನು ಪಡೆದು ಧರ್ಮವನ್ನು ಬೆಳೆಸಿ, ಉಳಿಸಿ ಮುಂದಿನ ಜನಾಂಗಕ್ಕೆ ವರ್ಗಾಯಿಸುವ ಮಹತ್ತರವಾದ ಜವಾಬ್ದಾರಿ ‘ಮದುವೆ’ಗಿದೆ ಎಂದು ತಿಳಿಸಿದರು.

    ಕುಟುಂಬದ ಗಾತ್ರದ ಬಗ್ಗೆ ಮಾತನಾಡಿದ,  ಡಾ|| ಪ್ರಭಾಕರ್ ಭಟ್‍ರವರು, ಪ್ರತೀ ಹಿಂದೂ ದಂಪತಿ ಕನಿಷ್ಟ 3 ಮಕ್ಕಳನ್ನಾದರೂ ಪಡೆಯತಕ್ಕದ್ದು. ಇಂದಿನ ದಿನಗಳಲ್ಲಿ ಮಕ್ಕಳ ಭವಿಷ್ಯದ ಖರ್ಚು-ವೆಚ್ಚಗಳನ್ನು ಮನಸ್ಸಿನಲ್ಲಿ ಲೆಕ್ಕಾಚಾರ ಹಾಕಿ ಕೇವಲ ಒಂದು ಮಗುವಿಗೆ ಸೀಮಿತಗೊಳಿಸುವುದನ್ನು ಕಾಣಬಹುದಾಗಿದೆ. ಮಕ್ಕಳ ಕಲರವ ಮನೆಯಲ್ಲಿ ಸಂತಸದ ವಾತಾವರಣವನ್ನು ತರುತ್ತದೆ. ಇಲ್ಲದಿದ್ದಲ್ಲಿ ಕೇವಲ ಬರಡಾಗಿ ಬಿಡುತ್ತದೆ. ಅಲ್ಲದೆ ಇಂದು ನಮ್ಮ ಸಮಾಜದ ಸಂಖ್ಯಾಬಲವೂ ಕ್ಷೀಣಿಸುತ್ತಾ ಬರುತ್ತಿದೆ. ಆ ದೃಷ್ಟಿಯಿಂದಲೂ ಸಂತಾನದ ಸಂಖ್ಯೆ ಕನಿಷ್ಠ ಮೂರು ಇರುವುದು ಒಳಿತು ಎಂದರು. ಕೇವಲ ಒಂದು ‘ಮಗು’ ಇದ್ದ ಮನೆಯು ಭಾವನಾರಹಿತವಾಗಿರುವುದನ್ನು ಕಾಣಬಹುದು. ಕಾರಣ ಆ ಮಗುವಿಗೆ ‘ಸೋದರತ್ವ’, ಪ್ರೀತಿಯ ಕೊರತೆಯಿಂದಾಗಿ ಮನಸ್ಸಿನಲ್ಲಿ ‘ಸ್ವಾರ್ಥತೆ’ ತುಂಬಿಕೊಳ್ಳುತ್ತಾ ಹೋಗುತ್ತದೆ. ಆ ಮಗುವಿಗೆ ಯಾವುದೇ ರೀತಿಯ ಸಂಬಂಧಗಳ ಸೊಗಸು ಇರುವುದಿಲ್ಲ. ಅಷ್ಟೇ ಅಲ್ಲದೆ ತನ್ನ ಒಂಟಿತನದಿಂದಾಗಿ ಹಲವು ಸುಖಗಳಿಂದ ವಂಚಿತವಾಗಿ ಬಿಡುತ್ತದೆ ಎಂದು ಅಭಿಪ್ರಾಯಪಟ್ಟರು.

ಇತ್ತೀಚಿನ ದಿನಗಳಲ್ಲಿ ಕುಟುಂಬ ಜೀವನದಲ್ಲೂ ಏಕತಾನತೆ, ವ್ಯಾವಹಾರಿಕತೆ ಕಂಡು ಬರುತ್ತಿದೆ. ಕಾರಣ ದಂಪತಿಗಳಿಬ್ಬರೂ ತಮ್ಮ ವೃತ್ತಿಜೀವನಕ್ಕೆ ಒತ್ತು ಕೊಟ್ಟು ಸಂಸಾರವನ್ನು ಕಡೆಗಣಿಸುತ್ತಿರುವುದು. ಜೀವನ ಉದ್ದೇಶ, ಕೇವಲ ಹಣ ಸಂಪಾದನೆ ಮಾತ್ರವಲ್ಲ ಗುಣ ಸಂಪಾದನೆಯೂ ಹೌದು. ಮಗು ತನ್ನ ತಂದೆ-ತಾಯಿಯರನ್ನು ನೋಡುತ್ತಾ ಕಲಿಯುತ್ತಾ ಹೋಗುತ್ತದೆ. ತನ್ನ ಹಿರಿಯರನ್ನು ಕಡೆಗಣಿಸುವುದು, ಪರಸ್ಪರ ಜಗಳ, ವಾಗ್ವಾದ, ವಿವಾದಗಳು ಮನೆಯಲ್ಲಿ ಹೆಚ್ಚುತ್ತಾ ಹೋದಂತೆ ಮನೆಯ ವಾತಾವರಣ ಹಳಸುತ್ತಾ ಹೋಗುತ್ತದೆ. ಇದು ಮುಂದೆ “ವಿಚ್ಚೇದನ” ದ ಹಾದಿ ತುಳಿಯುತ್ತದೆ. ಜೀವನದಲ್ಲಿ ಅತ್ಯಂತ ಹೀನ ಕೆಲಸ ಎಂದರೆ ‘ವಿವಾಹ ವಿಚ್ಛೇದನ’ ಎನ್ನುತ್ತಾ, ಶ್ರೀಯುತರು ಈ ಮೂಲಕ ಕುಟುಂಬದ ಮಂದಿಗೆ ನೋವನ್ನು ಹಂಚುತ್ತೇವೆ ಎಂದರು. 3 ವರ್ಷಗಳ ಹಿಂದೆಯೇ ಹೈಕೋರ್ಟಿನಲ್ಲಿ ಏನಿಲ್ಲವೆಂದರೂ 28 ಸಾವಿರ ವಿಚ್ಛೇದನ ಅರ್ಜಿಗಳಿದ್ದವು. ಆದರೆ ಡೈವೋರ್ಸ್ ಹಿಂದೂ ಸಂಸ್ಕೃತಿಯೇ  ಅಲ್ಲ ಅದು ಪಾಶ್ಚಾತ್ಯ ಸಂಸ್ಕೃತಿಯ ಎರವಲು ಎಂದರು.

    ಸಂಸಾರದಲ್ಲಿ ‘ತಾಯಿ’ ಯ ಮಹತ್ವವನ್ನು ತಿಳಿಸುತ್ತಾ ಕುಟುಂಬದ ಒಗ್ಗೂಡುವಿಕೆಗೆ ತಾಯಿ ಅತ್ಯಂತ ಹೆಚ್ಚಿನ ಯೋಗದಾನ ನೀಡುತ್ತಾಳೆ. ಸಂಸಾರ ಗುಣಾಧಾರಿತವಾಗಿರಬೇಕಲ್ಲದೆ ಹಣಾಧಾರಿತ ಅಲ್ಲ ಎನ್ನುತ್ತಾ ಮನೆಯ ಎಲ್ಲಾ ಮಂದಿಗೆ ಉತ್ತಮ ಸಂಸ್ಕಾರ ಬರುವುದಕ್ಕೆ ಮೂಲಕಾರಣವೇ ತಾಯಿ. ‘ತಾಯಿ’ ಮನೆಯ ‘ಆತ್ಮ’ ಎನ್ನುತ್ತಾ ತಂದೆ-ತಾಯಿಯೇ ಮಗು ಮೊದಲು ಕಾಣುವ ಸಮಾಜದ ಸದಸ್ಯರು. ಅವರ ನಡೆ-ನುಡಿ, ಗುಣ-ಅವಗುಣ ಎಲ್ಲಾ ಆ ಮಗುವಿಗೆ ಆದರ್ಶ. ಎಲ್ಲಾ ಮಕ್ಕಳಿಗೆ ತನ್ನ ತಂದೆ ತಾಯಿಯ ಮೇಲೆ ಅಚಲ ನಂಬಿಕೆ. ಹಾಗಾಗಿ ಇಬ್ಬರೂ ಅಂದರೆ ತಾಯಿ-ತಂದೆ ತಮ್ಮ ಜೀವನವನ್ನು ಆ ಮಕ್ಕಳಿಗೆ “ಆದರ್ಶ ಪ್ರಾಯ” ವಾಗಿ ನಡೆಸಬೇಕೆಂದರು. ಇದಕ್ಕೆ ಉದಾಹರಣೆಯಾಗಿ ಮನೆಯ ಹಿರಿಯರು ದೇವರ ಪೂಜೆಯನ್ನು ದಿನಾಲೂ ಆಚರಿಸುವುದು, ಮನೆಯವರೆಲ್ಲರೂ ದಿನಕ್ಕೊಂದು ಬಾರಿಯಾದರೂ ಒಟ್ಟಾಗಿ ಕುಳಿತು ಭೋಜನ ಸ್ವೀಕಾರ, ಇತ್ಯಾದಿ ಕಂಡುಬಂದಲ್ಲಿ, ಭವಿಷ್ಯದಲ್ಲಿ ಮಕ್ಕಳಲ್ಲಿಯೂ ಸಹ ಆ ಆಚರಣೆಯು ಮುಂದುವರಿಯುತ್ತದೆ. ಆದರೆ ಈ ಪದ್ಧತಿಗಳು ನಿಧಾನವಾಗಿ ಕಣ್ಮರೆಯಾಗುತ್ತಿರುವುದು ನಿಜಕ್ಕೂ ದು:ಖಕರ ಸಂಗತಿ ಎಂದು ಹೇಳಿದರು.

    ‘ಇಂದಿನ ಆಧುನಿಕ ಜಗತ್ತಿನಲ್ಲಿ ದಂಪತಿಗಳೀರ್ವರೂ ದುಡಿಯುತ್ತಿರುವ ಕಾಲಘಟ್ಟದಲ್ಲಿ ಮಗುವಿಗೆ ಸಿಗಬೇಕಾದ ತಂದೆ-ತಾಯಿ ಹಾಗೂ ಹಿರಿಯರ ಪ್ರೀತಿ, ವಾತ್ಸಲ್ಯ, ವಿಶ್ವಾಸ ಕಡಿಮೆ ಆಗುತ್ತಿರುವುದು ಕಂಡು ಬರುತ್ತಿದೆ. ಮಗು ಮುಂದೆ ಬೆಳೆದು ನಿಂತಾಗ ತನ್ನ ಪಾಲಕ-ಪೋಷಕರಿಂದ ಸಿಗದ ಪ್ರೀತಿ ವಿಶ್ವಾಸವನ್ನು ಹೇಗೆ ತಾನೇ ಹಿಂದೆ ನೀಡುತ್ತದೆ? ಆದ್ದರಿಂದ ತಂದೆ-ತಾಯಿ ತಮ್ಮ ದಿನಚರಿಯಲ್ಲಿ ಮಕ್ಕಳೊಂದಿಗೆ ಬೆರೆಯುವುದನ್ನು ಮರೆಯಬಾರದು’ ಎಂದು ಕಿವಿಮಾತು ತಿಳಿಸಿದರು.

    ಇಂದಿನ ಮಮ್ಮಿ-ಡ್ಯಾಡಿ ಸಂಸ್ಕೃತಿಯಲ್ಲಿ ಧರ್ಮಪತ್ನಿ “ಮಿಸೆಸ್” ಆಗಿರುವುದನ್ನು ಹಾಸ್ಯಭರಿತವಾಗಿ ಖಂಡಿಸುತ್ತಾ, ಶ್ರೀ ರಾಮಚಂದ್ರ ತನ್ನ ಪತ್ನಿಯನ್ನು “ಸಹಧರ್ಮಿಣಿ” ಎಂದು ಸಂಭೋದಿಸುವುದನ್ನು ತಿಳಿಸುತ್ತಾ, ಸೀತೆ ನನಗೆ ಧರ್ಮದ ಹಾದಿಯಲ್ಲಿ ನಡೆಯುವ ಬಗ್ಗೆ ಬೋಧಿಸಿದ್ದಾಳೆ. ಹಾಗಾಗಿ ‘ಸಹಧರ್ಮಿಣಿ’ ಎನ್ನುವುದನ್ನು ಉಲ್ಲೇಖಿಸಿದರು.

    ಜಗತ್ತಿನ ಹೆಚ್ಚಿನ ಎಲ್ಲಾ ಧರ್ಮೀಯರು ತಮ್ಮ ತಮ್ಮ ಧರ್ಮಗ್ರಂಥಗಳ ಪಠಣ ದಿನಕ್ಕೊಂದು ಬಾರಿಯಾದರೂ ಮಾಡುವುದನ್ನು ರೂಢಿಸಿಕೊಂಡಿದ್ದಾರೆ. ಆದರೆ ಹಿಂದೂ ಧರ್ಮದಲ್ಲಿ ಅತ್ಯಂತ ಉನ್ನತ ಮಟ್ಟದ ಜ್ಞಾನ ಭಂಡಾರಗಳಾದ ಮಹಾಕಾವ್ಯ ರಾಮಾಯಣ, ಮಹಾಭಾರತ, ಪುರಾಣ ಪುಣ್ಯ ಕಥೆಗಳು ಅಪಾರ ಸಂಖ್ಯೆಯಲ್ಲಿದ್ದರೂ ಅದರ ಪಠಣ ಇಲ್ಲವೇ ಇಲ್ಲ ಎನ್ನಬಹುದು. ಇದರ ಪಠಣ ಕೇವಲ ಬಾಳ ಸಂಜೆಯಲ್ಲಿರುವವರಿಗಾಗಿ ಎಂಬಂತೆ ಬಿಂಬಿಸಲಾಗಿದೆ.

    ಆದರೆ ಧರ್ಮಗ್ರಂಥಗಳೆಲ್ಲವೂ ನಮ್ಮ ಜೀವನಾದರ್ಶಗಳು ಹಾಗೂ ಜೀವನಕ್ರಮದ ಬಗ್ಗೆ ಬೆಳಕು ಚೆಲ್ಲುತ್ತವೆ. ‘ಭಗವದ್ಗೀತೆ’ಯನ್ನು ತಿಳಿಸಿದ ಶ್ರೀ ಕೃಷ್ಣ ನಿಜವಾಗಿಯೂ ಈ ಜಗತ್ತು ಕಂಡ ಪ್ರಪ್ರಥಮ ಮಾನಸಿಕ ತಜ್ಞ ಎಂದು ಉಲ್ಲೇಖಿಸಿದರು. ಹಾಗಾಗಿ ಧರ್ಮಾಧಾರಿತ ಸಂಸಾರ ನಿರ್ವಹಣೆಗೆ ಹಿರಿಯರ ಮಾರ್ಗದರ್ಶನದೊಂದಿಗೆ ಧರ್ಮಗ್ರಂಥ ಪಠಣ, ಭಜನೆ, ದೇವರ ಪ್ರಾರ್ಥನೆ, ಪೂಜೆ-ಪುರಸ್ಕಾರ, ಹಬ್ಬ-ಹರಿದಿನಗಳ ಆಚರಣೆಯು ಕಡ್ಡಾಯವಾಗಬೇಕು. ಆಗ ಮಾತ್ರ ಜೀವನಕ್ರಮ ಎಂದೂ ಹಳಿ ತಪ್ಪಲಾರದು ಎಂದು ಅಭಿಪ್ರಾಯ ಪಟ್ಟರು.

    ಮದುವೆಯ ಸಂದರ್ಭದಲ್ಲಿ ಮದುಮಗ ಹೇಳುವ ಧರ್ಮೇಚ…ಅರ್ಥೇಚ….ಕಾಮೇಚ….ನಾತಿಚರಾಮಿ ಇದರ ಅರ್ಥವನ್ನು ಸವಿಸ್ತಾರವಾಗಿ ಹೇಳುತ್ತಾ ಹೆಣ್ಣೊಂದು ತನ್ನ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡು ಒಬ್ಬ ವ್ಯಕ್ತಿಯ ಮೇಲೆ ನಂಬಿಕೆ-ವಿಶ್ವಾಸವಿರಿಸಿ ಹೊಸಜಗತ್ತಿಗೆ ಪ್ರವೇಶಿಸುತ್ತಾಳೆ. ಆಕೆಯು ಹೊಸ ಪರಿಸರ, ಹೊಸ ರೀತಿ-ರಿವಾಜು ಹಾಗೂ ಹೊಸ ಮುಖಗಳ ಜತೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕೆಲ್ಲ ಯೋಗ್ಯ ರೀತಿಯಲ್ಲಿ ಸಹಕರಿಸಬೇಕಾದದ್ದು ಪತಿಯ ಕರ್ತವ್ಯ. ಈ ನಡಾವಳಿಯಲ್ಲಿ ಏನಾದರೂ ಸ್ವಲ್ಪ ಹೆಚ್ಚು-ಕಮ್ಮಿಯಾದಲ್ಲಿ ‘ಬಾಳ ದೋಣಿ’ ಯಲ್ಲೊಂದು ಸಣ್ಣಬಿರುಕು ಉಂಟಾದೀತು. ಅದನ್ನು ಅರಿತು ಅಲ್ಲಿಯೇ ಸರಿಪಡಿಸಿಕೊಳ್ಳುವುದು ನಿಜಕ್ಕೂ ಜಾಣತನ ಎಂದರು.

    ಪತಿ-ಪತ್ನಿಯರ ಸಂಬಂಧ ಹಾಗೂ ಮನಸ್ಥಿತಿಯನ್ನು ಅರ್ಥೈಸಿಕೊಳ್ಳುವಿಕೆಯ ಬಗ್ಗೆ ಉದಾಹರಣೆ ಮೂಲಕ ಮನನ ಮಾಡಿಸುವ ಪ್ರಯತ್ನ ಮಾಡಿದರು. ಅತ್ತೆಮನೆಗೆ ಬಂದ ಸೊಸೆಯ ಚಿತ್ತದಲ್ಲಿ ಮೊದಲಿಗೆ ತನ್ನ ತವರು, ತಾಯಿ-ತಂದೆ, ಅಣ್ಣ-ತಮ್ಮ ಇವರ ಚಿತ್ರಗಳೇ ತುಂಬಿರುತ್ತದೆ. ಅದನ್ನು ಮರೆಸಿ, ಗಂಡ, ಅತ್ತೆ-ಮಾವ, ಮೈದುನ, ನಾದಿನಿಯರನ್ನು ಪ್ರತಿಷ್ಠಾಪಿಸಲು ಕೆಲವಾರು ದಿನಗಳೇ ಬೇಕಾಗುತ್ತದೆ. ಆ ಪರಿಸ್ಥಿತಿಯಲ್ಲಿ ಪತ್ನಿ ತನ್ನ ತವರಿನತ್ತ ಹೋಗುವ ಪ್ರಸ್ತಾಪ ಗಂಡನಲ್ಲಿ ಮಾಡುತ್ತಾಳೆ. ಅದೇ ವೇಳೆಗೆ ತನ್ನ ಪತಿಯು ತನ್ನೊಂದಿಗೆ ಬರಬೇಕೆಂದು ಬಯಸುತ್ತಾಳೆ ಕಾರಣ ತನ್ನ ಹಾಗೂ ಪತಿಯ ಅನುಬಂಧವನ್ನು ತವರಿನವರಿಗೆ ಪರಿಚಯಿಸುವ ಇಚ್ಚೆ. ಹಾಗೇ ‘ಪತಿ’ ತನ್ನೊಂದಿಗೆ ಒಂದೆರಡು ದಿನ ತನ್ನ ತವರಲ್ಲಿ ಇರುವ ಇಚ್ಚೆ ಪ್ರಕಟಿಸುತ್ತಾಳೆ. ಅವಳಿಗೆ ತನ್ನವರಿಗೆ, ತನ್ನ ಸ್ನೇಹಿತರಿಗೆ ತನ್ನ ಪತಿಯನ್ನು ಹೆಮ್ಮೆಯಿಂದ ಪರಿಚಯಿಸುವ ಇಂಗಿತ ಅವಳದಾಗಿರುತ್ತದೆ. ಆದರೆ ‘ಪತಿ ಮಹಾಶಯ’ ಈ ಎಲ್ಲದಕ್ಕೂ ‘ನಾನು ತುಂಬಾ ಬ್ಯುಸಿ’ ಎಂಬ ಒಂದೇ ವಾಕ್ಯದಿಂದ ತಣ್ಣೀರೆರೆಚಿದರೆ ಅಲ್ಲಿಗೆ ಮುಕ್ತಾಯವಾಗುತ್ತದೆ. ಆದ್ದರಿಂದ ಪತ್ನಿಯ ಮನೋಭಾವನೆಯನ್ನು ಅರ್ಥೈಸಿಕೊಂಡು, ಗೌರವದಿಂದ ನಡೆಸಿಕೊಡುವುದು ಪತಿಯ ಕರ್ತವ್ಯವಷ್ಟೇ ಅಲ್ಲ ಧರ್ಮವೂ ಹೌದು ಎಂದು ಹೇಳಿದರು.

    ತಮ್ಮ ವೈದ್ಯಕೀಯ ಅನುಭವದಿಂದ ನವವಧುಗಳಿಗೆ ಕಿವಿಮಾತು ಹೇಳುತ್ತಾ ಎಂದಿಗೂ ನಿಮ್ಮ ಪ್ರಥಮ ಶಿಶುವಿನ ಜನನಕ್ಕೆ ಅಡ್ಡಿ ಆಗಬಾರದು. ಯಾವತ್ತೂ ಮೊದಲ ಮಗುವಿನ  ಗರ್ಭಪಾತವನ್ನು ಮಾಡಿಸಲೇಬಾರದು ಹಾಗೂ ಮೊದಲ ಗರ್ಭವತಿಯಾಗುವುದನ್ನು ಮುಂದೂಡುವುದೂ ತಪ್ಪು. ಇದು ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಲವಾರು ರೀತಿಯ ತೊಂದರೆಗಳಿಗೆ ಕಾರಣವಾಗಬಹುದೆಂದು ತಿಳಿಸಿದರು. ಈ ರೀತಿಯಾಗಿ ಜೀವನಕ್ರಮದ ಹತ್ತು-ಹಲವು ಮಜಲುಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ಸಮರ್ಥವಾದ ಉದಾಹರಣೆಗಳೊಂದಿಗೆ, ಮನಸ್ಸಿಗೊಪ್ಪುವ ರೀತಿಯಲ್ಲಿ ನವವಿವಾಹಿತರಿಗೆ ಮನದಟ್ಟು ಮಾಡುವಲ್ಲಿ ಡಾ|| ಪ್ರಭಾಕರ್ ಭಟ್ ಯಶಸ್ವಿಯಾದರು.
    
    ನಂತರ ಡಾ|| ಕಮಲಾಭಟ್ ರವರು ಕೆಲವಾರು ನಿದರ್ಶನ ಹಾಗೂ ಜೀವನ ಸಂದರ್ಭಗಳ ಮೂಲಕ ಬದುಕಿನ ಓಟದಲ್ಲಿರಬೇಕಾದ ಪರಸ್ಪರ ಹೊಂದಾಣಿಕೆ, ವಿಶ್ವಾಸ ಹಾಗೂ ನಂಬಿಕೆಯ ಬಗ್ಗೆ ತಮ್ಮದೇ ಆದ ಶೈಲಿಯಲ್ಲಿ ವಿವರಿಸಿದರು. ನವವಧುಗಳು ತಮ್ಮ ಪತಿಯ ಮನೆಯಲ್ಲಿ ಹಾಗೂ ಮನದಲ್ಲಿ ಹೇಗೆ ಆವರಿಸಿಕೊಂಡು ಎಲ್ಲರ ಪ್ರೀತಿ-ವಿಶ್ವಾಸಗಳಿಸಿಕೊಳ್ಳಬೇಕೆಂಬುದನ್ನು ಹಲವಾರು ಉದಾಹರಣೆಗಳ ಮೂಲಕ ಪ್ರಸ್ತುತ ಪಡಿಸಿದರು. ನಂತರ ಡಾ|| ಪ್ರಭಾಕರ್ ಭಟ್ ದಂಪತಿಗಳನ್ನು ವಿವಾಹ ವೇದಿಕೆಯ ಅಧ್ಯಕ್ಷರಾದ ಶ್ರೀ ರಾಘವೇಂದ್ರ ಶೆಣೈ ಡೆಚ್ಚಾರು, ಶ್ರೀಮತಿ ಪ್ರಮೀಳಾ ಶೆಣೈ ಶಾಲು ಹೊದಿಸಿ ಗೌರವಿಸಿದರು.
 ಈ ಸಂದರ್ಭದಲ್ಲಿ 50 ಸಂವತ್ಸರಗಳನ್ನು ಪೂರೈಸಿದ ಆದರ್ಶ ಹಿರಿಯ ದಂಪತಿಗಳಾದ ಶ್ರೀಮತಿ ವಸಂತಿ ಮತ್ತು ಶ್ರೀ ಗಣಪತಿ ಶೆಣೈ ಡೆಚ್ಚಾರು, ಶ್ರೀಮತಿ ಲಕ್ಷ್ಮೀ ಮತ್ತು ಶ್ರೀ ನಾರಾಯಣ ಪ್ರಭು ಬರೆಪ್ಪಾಡಿ, ಶ್ರೀಮತಿ ಸುನೀತಾ ಮತ್ತು ಶ್ರೀ ಗೋಪಾಲ ಶೆಣೈ ಕೊಡಂಗೆ, ಶ್ರೀಮತಿ ಯಶೋಧಾ ಮತ್ತು ಶ್ರೀ ಶ್ರೀನಿವಾಸ ಶೆಣೈ ಕೂಡಿಬೈಲು, ಶ್ರೀಮತಿ ಸುಶೀಲಾ ಮತ್ತು ಶ್ರೀ ಅನಂತ ನಾಯಕ್ ಮೈರಾ, ಶ್ರೀಮತಿ ಸುನಂದ ಮತ್ತು ಶ್ರೀ ವೆಂಕಟ್ರಮಣ ನಾಯಕ್ ಒಡ್ಡೂರು, ಶ್ರೀಮತಿ ಗೀತಾ ಮತ್ತು ಶ್ರೀ ಕೊಗ್ಗಣ್ಣ ನಾಯಕ್ ಕಡೇಶ್ವಾಲ್ಯ, ಶ್ರೀಮತಿ ಲಕ್ಷ್ಮೀ ಮತ್ತು ಶ್ರೀ ನಾರಾಯಣ ಸಾಮಂತ್ ಮರೋಳಿ, ಶ್ರೀಮತಿ ಗುಲಾಬಿ ಮತ್ತು ಶ್ರೀ ಪುಂಡಲೀಕ ಶೆಣೈ ಕೂಡಿಬೈಲು, ಶ್ರೀಮತಿ ಶಾರದಾ ಮತ್ತು ಶ್ರೀ ಗಣಪತಿ ನಾಯಕ್ ಕೊಡಿಂಬಾಡಿ, ಶ್ರೀಮತಿ ಸುಜಾತ ಮತ್ತು ಶ್ರೀ ರಮೇಶ್ ಸಾಮಂತ್ ಶರ್ಬತ್ಕಟ್ಟೆ, ಶ್ರೀಮತಿ ವನಿತಾ ಮತ್ತು ಶ್ರೀ ನರಸಿಂಹ ನಾಯಕ್ ಕಾವಳಕಟ್ಟೆ, ಶ್ರೀಮತಿ ಲಕ್ಮೀ ಮತ್ತು ಶ್ರೀ ಸಂಜೀವ ಭಟ್ ಕಟ್ಟಣಿಗೆ, ಶ್ರೀಮತಿ ಲಲಿತಾ ಮತ್ತು ಶ್ರೀ ಸಂಜೀವ ಪ್ರಭು ಮಾವಂತ ಬೆಟ್ಟು, ಶ್ರೀಮತಿ ಮತ್ತು ಶ್ರೀ ಶ್ರೀಧರ್ ನಾಯಕ್ ಬೋಳಂಗಡಿ, ಶ್ರೀಮತಿ ಮತ್ತು ಶ್ರೀ ಬಾಲಕೃಷ್ಣ  ಶೆಣೈ ಶೆಂಡೆ, ಮುಂತಾದವರನ್ನು ವೇದಿಕೆಯ ವತಿಯಿಂದ ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸನ್ಮಾನಿಸಲಾಯಿತು.

    ಅಂತಿಮವಾಗಿ ಶುಭವಿವಾಹ 2018 ರ ಅಧ್ಯಕ್ಷರಾದ ಶ್ರೀ ಡೆಚ್ಚಾರು ರಾಘವೇಂದ್ರ ಶೆಣೈ ಧನ್ಯವಾದ ಸಮರ್ಪಿಸಿದರು. ಹಿರಿಯ ದಂಪತಿಗಳ ಸನ್ಮಾನ ಕಾರ್ಯಕ್ರಮವನ್ನು ಶ್ರೀಮತಿ ದಿವ್ಯಾ ವಿನಯ್ ಸಾಮಂತ್ ನೆರವೇರಿಸಿ ಕೊಟ್ಟರು. ಶ್ರೀ ಶಾಂತಾರಾಮ್ ಪ್ರಭು, ಶ್ರೀಮತಿ ಸುಗುಣ ಎಸ್. ಪ್ರಭು ಕಾರ್ಯಕ್ರಮವನ್ನು ನಿರೂಪಿಸಿದರು.

ಶುಚಿ-ರುಚಿಯಾದ ಭೋಜನ

    ಬಂದ ಎಲ್ಲಾ ಅತಿಥಿ ಅಭ್ಯಾಗತರಿಗೆ ಊಟೋಪಚಾರ ವ್ಯವಸ್ಥೆಯನ್ನು ಶ್ರೀ ಶಿವರಾವ್ ಕೂಡಿಬೈಲು ಹಾಗೂ ಶ್ರೀ ವೆಂಕಟರಾಯ ಪ್ರಭು ಪೂರ್ಲಿಪಾಡಿಯವರು ವಹಿಸಿಕೊಂಡು ಸಮರ್ಥವಾಗಿ ನಿರ್ವಹಿಸಿದರು.

    ಬೆಳಗ್ಗಿನ ಉಪಹಾರಕ್ಕೆ ಇಡ್ಲಿ-ಚಟ್ನಿ-ಸಾಂಬಾರ್ ಹಾಗೂ ಪೈನಾಪಲ್ ಪುಡ್ಡಿಂಗ್ ನೊಂದಿಗೆ ಚಹ-ಕಾಫಿಯನ್ನು ವ್ಯವಸ್ಥೆಗೊಳಿಸಲಾಗಿತ್ತು. ಮಧ್ಯಾಹ್ನದ ಭೋಜನ ವ್ಯವಸ್ಥೆಯಲ್ಲಿ ಅನ್ನ, ಸಾರು, ಸೌತೆಹುಳಿ, ವಿವಿಧ ತರಕಾರಿಗಳ ಪಲ್ಯ, ಬಟಾಣಿ-ಬಟಾಟೆ ಗಸಿ, ಸುವರ್ಣ ಗಡ್ಡೆ ಹುಡಿ ಚಟ್ನಿ, ಕೋಸಂಬರಿ ಹಾಗೂ ಪಾಯಸ. ಸಂಜೆ : ಗೆಣಸಿನ ಪೋಡಿ, ಪತ್ರೊಡೆ, ಟೊಮೆಟೋ ಬಾತ್, ಕಾಫಿ-ಚಾ. ಭೋಜನ ವ್ಯವಸ್ಥೆ ನೆರೆದ ಎಲ್ಲರ ಮೊಗದಲ್ಲಿ ಮಂದಹಾಸ ಮೂಡಿಸಿತು. ಭೋಜನ ತಯಾರಿಯ ಸಂಪೂರ್ಣ ಜವಾಬ್ದಾರಿಯನ್ನು ಶ್ರೀ ಕಮಲಾಕ್ಷ ಪ್ರಭು ಪದ್ರೆಂಗಿ ಕೊರ್ಡೇಲ್ ಹಾಗೂ ಸಿಬ್ಬಂಧಿ ವಹಿಸಿಕೊಂಡಿದ್ದರು.

    ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಮಾಜದ ಜಿಲ್ಲಾ ಸಂಘದ ಪದಾಧಿಕಾರಿ, ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ ವಗ್ಗ ವಲಯದ ಪ್ರತಿನಿಧಿ ಹಾಗೂ ಪ್ರವೀಣ್ ಡಿಜಿಟಲ್ ಸ್ಟುಡಿಯೋದ ಶ್ರೀ ಪ್ರವೀಣ್ ನಾಯಕ್ ಕಲಾಯಿಯವರು ನಮ್ಮ ಸಂಘಟನೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ವೀಡಿಯೋ ದಾಖಲಾತಿ ಹಾಗೂ ಛಾಯಾಚಿತ್ರಣದಂತಹ ಪ್ರಮುಖ ವಿಭಾಗದ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತಿರುವುದು ನಿಜಕ್ಕೂ ಅಭಿನಂದನೀಯ.     ಅಷ್ಟೇ ಅಲ್ಲದೆ “ಎಲೆ ಮರೆಯ ಕಾಯಿಯಂತೆ” ನಮ್ಮ ಕಾರ್ಯಕ್ರಮಗಳ ಚಿತ್ರಗಳನ್ನು ವಾಟ್ಸಾಪ್, ಫೇಸ್ ಬುಕ್ ನಂತಹ ಸಾಮಾಜಿಕ ಜಾಲತಾಣದಲ್ಲೂ ಪಸರಿಸುವಂತೆ ಮುತುವರ್ಜಿ ವಹಿಸುವುದು ಇವರ ವಿಶೇಷತೆ. ಶ್ರೀಯುತರ ಇಂತಹ ನಿಸ್ವಾರ್ಥ ಸೇವೆಗೆ ವೇದಿಕೆಯ ಎಲ್ಲಾ ಪದಾಧಿಕಾರಿಗಳು ತಮ್ಮ ಅಭಿನಂದನೆಗಳನ್ನು ಈ ಮೂಲಕ ಸಲ್ಲಿಸಿದ್ದಾರೆ.