ಪಡ್ಡಂದಡ್ಕ ಆರೋಗ್ಯ ಶಿಬಿರ

ಪಡ್ಡಂದಡ್ಕ ಸಮುದಾಯ ಭವನದಲ್ಲಿ ಬೃಹತ್ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ

ಬೆಳ್ತಂಗಡಿ: ತಾಲೂಕಿನ ವೇಣೂರಿನ ಪಡ್ಡಂದಡ್ಕ ಸಮುದಾಯ ಭವನದಲ್ಲಿ ಊರಿನ ಹಲವಾರು ಸಂಘ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ.) ಮಂಗಳೂರು, ಕೆಎಂಸಿ ಆಸ್ಪತ್ರೆ ಅತ್ತಾವರ,ಮಂಗಳೂರು ಹಾಗೂ ಇಂಡಿಯನ್ ಕ್ಯಾನ್ಸರ್ ಸೊಸೈಟಿ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಬೃಹತ್ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರವು ಜು. 27, 2025 ರಂದು ನಡೆಯಿತು.

ಶಿಬಿರವನ್ನು ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಜನರು ಉತ್ತಮ ಆರೋಗ್ಯವನ್ನು ಕಾಪಾಡಬೇಕು ನಾವೆಲ್ಲರೂ ಹಳ್ಳಿಯಲ್ಲಿ ಹುಟ್ಟಿ ಬೆಳೆಯುತ್ತಿರುವ ಜನರು ಆಗಿರುವುದರಿಂದ ಎಲ್ಲರೂ ತಮ್ಮ ತಮ್ಮ ಹೊಲಗದ್ದೆಗಳಲ್ಲಿ ಕೃಷಿಯನ್ನು ಮಾಡಿ ನಮಗೆ ಬೇಕಾದ ತರಕಾರಿ ಇರಬಹುದು ಹಣ್ಣು ಹಂಪಲು ಇರಬಹುದು ಎಲ್ಲಾ ರೀತಿಯ ಆಹಾರಗಳನ್ನು ರಾಸಾಯನಿಕ ರಹಿತವಾಗಿ ಉಪಯೋಗಿಸುವಂತೆ ಮಾಡಿಕೊಳ್ಳಬೇಕು. ಇದರಿಂದ ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನವನ್ನು ಉಳಿಸಿ ಬೆಳೆಸಿದಂತಾಗುತ್ತದೆ.ಮಾತ್ರವಲ್ಲ, ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ. ಇಂತಹ ಶಿಬಿರಗಳು ಎಲ್ಲರಿಗೂ ಪ್ರಯೋಜನವಾಗುತ್ತದೆ ಮಾತ್ರವಲ್ಲ ಇದೊಂದು ಮಾದರಿ ಸಮಾಜಮುಖಿಕಾರ್ಯ ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ನಮ್ಮೂರಿನಲ್ಲಿ ಎಲ್ಲಾ ಸಂಘಟನೆಗಳು ಸೇರಿಕೊಂಡು ಮಾಡುತ್ತಿರುವ ಈ ಕಾರ್ಯ ನಿಜವಾಗಿಯೂ ಸ್ವಾಸ್ಥ್ಯ ‌‌ಹಾಗೂ ಆರೋಗ್ಯಕರ ಸಮಾಜಕ್ಕೆ ಮಾತ್ರವಲ್ಲ ಊರಿಗೂ ಆರೋಗ್ಯಕರ ವಾತಾವರಣವನ್ನು ಸೃಷ್ಟಿಸುತ್ತದೆ ಇದು ಒಳ್ಳೆಯ ಕೆಲಸ ಎಂದು ಶ್ಲಾಘಿಸಿ ಆಯೋಜಕರಿಗೆ ಶುಭವನ್ನು ಹಾರೈಸಿದರು.

ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಸಂಚಾಲಕರಾದ ಮಂಗಳೂರಿನ ಉದ್ಯಮಿಗಳಾದ ರಮೇಶ ನಾಯಕ್ ಮೈರಾ ಅವರು ಸ್ವಾಗತಿಸಿ, ಪ್ರಸ್ತಾವನೆಯನ್ನು ನೀಡುತ್ತಾ ನಾವೆಲ್ಲರೂ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಕಠಿಣ ಪರಿಶ್ರಮದಿಂದ ಶರೀರವನ್ನು ಗಟ್ಟಿಮುಟ್ಟಾಗಿ ಬೆಳೆಸಿಕೊಂಡಿದ್ದೇವೆ. ಆದ್ದರಿಂದ ಬದುಕಿನ ಕೆಲವೊಂದು ಸಂದರ್ಭಗಳಲ್ಲಿ ಸಾಧಾರಣ ನೋವುಗಳು ಅಥವಾ ಕಾಯಿಲೆಗಳು ಬಂದಾಗ ಚಿಕಿತ್ಸೆಯನ್ನು ಪಡೆಯದೆ ಇರುತ್ತೇವೆ. ವಾಸ್ತವದಲ್ಲಿ ಹೊಸ ಹೊಸ ಸಂಶೋಧನೆಗಳಿಂದ ಎಲ್ಲಾ ಕಾಯಿಲೆಗಳಿಗೆ ಖಂಡಿತವಾಗಿಯೂ ಮದ್ದು ಚಿಕಿತ್ಸೆಗಳು ಧಾರಾಳವಾಗಿ ಇದೆ. ಮಾಹಿತಿಯ ಕೊರತೆ ಮತ್ತು ಕಾಯಿಲೆಗಳ ಗುಣಲಕ್ಷಣಗಳ ಅರಿವು ನಮ್ಮಲ್ಲಿ ಇಲ್ಲದಿರುವುದರಿಂದ ಸರಿಯಾದ ಚಿಕಿತ್ಸೆಯನ್ನು ಪಡೆಯುವಲ್ಲಿ ವಿಫಲರಾಗುತೇವೆ. ಯಾವುದೇ ಕಾಯಿಲೆಗಳು ಪ್ರಾಥಮಿಕ ಹಂತದಲ್ಲಿ ತಿಳಿದುಕೊಂಡರೆ ಪ್ರಸ್ತುತ ಮದ್ದು ಚಿಕಿತ್ಸೆಗಳು ಅಥವಾ ಶಸ್ತ್ರ ಚಿಕಿತ್ಸೆ ಗಳಿಂದ ಗುಣಪಡಿಸಲು ಖಂಡಿತವಾಗಿಯೂ ಸಾಧ್ಯವಿದೆ ಮೊದಲ ಹಂತದಲ್ಲಿ ಇದೆಲ್ಲವೂ ಸಾಧ್ಯ ಆದರೆ ನಾವು ಅದರ ಸದುಪಯೋಗವನ್ನು ಪಡೆದುಕೊಳ್ಳುವಲ್ಲಿ ವಿಫಲರಾಗುತ್ತೇವೆ. ಆದ್ದರಿಂದ ಇದರ ಅರಿವು ಮೂಡಿಸುವುದು ರೋಗಲಕ್ಷಣಗಳ ಮಾಹಿತಿಗಳನ್ನು ನೀಡುವುದು ಇದರ ಮುಖಾಂತರ ನಿಯಮಬದ್ಧವಾಗಿ ತಜ್ಞ ವೈದ್ಯರುಗಳ ಸಲಹೆ ಸೂಚನೆಗಳನ್ನು ಪಡೆದುಕೊಳ್ಳುವುದು ಚಿಕಿತ್ಸೆಗಳ ಮಾಹಿತಿಯನ್ನು ಪಡೆದುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಆದ್ದರಿಂದ ಇಂತಹ ವೈದ್ಯಕೀಯ ತಪಾಸಣಾ ಹಾಗೂ ಆರೋಗ್ಯ ಶಿಬಿರವು ಬಹಳ ಮಹತ್ವವನ್ನು ಪಡೆದಿದೆ. ಅದರ ಜೊತೆಯಲ್ಲಿ ಯಾವುದೇ ಸಂಶೋಧನೆಯಿಂದ ತಯಾರಿಸಲು ಆಗದಂತಹ ವಸ್ತು ಇದ್ದರೆ ಅದು ಮಾನವ ರಕ್ತ ಮಾತ್ರ .ಇದು ಮನುಷ್ಯನು ತನ್ನ ಮಾನವೀಯತೆಯಿಂದ ಮನುಕುಲಕ್ಕೆ ಮಾತ್ರವಲ್ಲ ಇನ್ನೊಬ್ಬರ ಬದುಕಿಗೆ ನೀಡುವಂತಹ ಶ್ರೇಷ್ಠ ದಾನ ಇದನ್ನು ನೀವೆಲ್ಲರೂ ಸೇರಿ ಮಾಡುತ್ತಿದ್ದೀರಿ ಇದು ನಿಜವಾಗಿಯೂ ಮಾನವೀಯತೆಯ ಕಾರ್ಯಗಳು ಆದ್ದರಿಂದ ಈ ಸಂದರ್ಭದಲ್ಲಿ ಇದಕ್ಕೆ ಸಹಕರಿಸಿದ ಎಲ್ಲ ಸಂಘ ಸಂಸ್ಥೆಗಳನ್ನು ಹಾಗೂ ಕೆಎಂಸಿ ಆಸ್ಪತ್ರೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗವನ್ನು ಮುಕ್ತ ಕಂಠದಿಂದ ಶ್ಲಾಘಿಸಿ ಅಭಿನಂದಿಸಿದರು.

ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸತೀಶ ಕಾಶಿಪಟ್ಣ ಅವರು ಊರಿನಲ್ಲಿ ಇಂತಹ ಶಿಬಿರಗಳು ಆಗುತ್ತಾ ಇರಬೇಕು ಇವುಗಳ ಪ್ರಯೋಜನಗಳನ್ನು ನಮ್ಮೂರಿನವರೆಲ್ಲರೂ ಪಡಕೊಳ್ಳಬೇಕು ಹಾಗೂ ಇಲ್ಲಿ ನೀಡಿದ ಸಲಹೆ ಸೂಚನೆಗಳನ್ನು ಪಾಲಿಸಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ನುಡಿದರು.

ಈ ಸಂದರ್ಭದಲ್ಲಿ ಸಾಮಾನ್ಯ ರೋಗ ವಿಭಾಗ , ಸ್ತ್ರೀ ರೋಗ ವಿಭಾಗ, ಎಲುಬು ಮತ್ತು ಕೀಲು ರೋಗ ವಿಭಾಗ, ಕಿವಿ, ಮೂಗು ಮತ್ತು ಗಂಟಲು ವಿಭಾಗ, ಕ್ಯಾನ್ಸರ್ ತಪಾಸಣೆ ವಿಭಾಗ, ಕಣ್ಣಿನ ವಿಭಾಗ, ಹೃದಯ ರೋಗ ವಿಭಾಗ ಮುಂತಾದ ಕಾಯಿಲೆಗಳ ಮಾಹಿತಿಗಳನ್ನು ತಜ್ಞ ವೈದ್ಯರು ನೀಡಿ ಬಳಿಕ ತಪಾಸಣೆ ಮಾಡಿದರು. ಮಾತ್ರವಲ್ಲದೇ ಶಿಬಿರಾರ್ಥಿಗಳಿಗೆ ಉಚಿತ ಬಿ.ಪಿ. ಹಾಗೂ ಮಧುಮೇಹ ತಪಾಸಣೆ ,ಉಚಿತ ಔಷಧ ವಿತರಣೆ , ಉಚಿತ ಇಸಿಜಿ ತಪಾಸಣೆ , ರಿಯಾಯಿತಿ ದರದಲ್ಲಿ ಕನ್ನಡಕಗಳ ವಿತರಣೆ ಮುಂತಾದ ಸೌಲಭ್ಯಗಳನ್ನುಆಯೋಜಿಸಲಾಗಿತ್ತು.

ಹಸಿರು ಕಾರ್ಡುಗಳ ಮೂಲಕ ಶಸ್ತ್ರ ಚಿಕಿತ್ಸೆಗೆ ಗರಿಷ್ಠ ರೂಪಾಯಿ 10,000/- ಮತ್ತು ಇತರ ಚಿಕಿತ್ಸೆಗಳಿಗೆ ಗರಿಷ್ಠ ರೂಪಾಯಿ 5,೦೦೦/- ವರೆಗೆ ಆಸ್ಪತ್ರೆಯ ಒಳರೋಗಿ ಸೌಲಭ್ಯಗಳನ್ನು ಕೆಎಂಸಿ ಆಸ್ಪತ್ರೆ ಅತ್ತಾವರದಲ್ಲಿ ನೀಡಲಾಯಿತು. ಈ ಹಸಿರು ಕಾರ್ಡುಗಳಿಗೆ ಶಿಬಿರದ ದಿನಾಂಕದಿಂದ ಒಂದು ತಿಂಗಳ ಅವಧಿಯನ್ನು ನೀಡಲಾಯಿತು. ಸುಮಾರು 4೦೦ ಕ್ಕೂ ಹೆಚ್ಚು ಸಾರ್ವಜನಿಕರು ಸಕಾಲಕ್ಕೆ ಆಗಮಿಸಿ ಇದರ ಸದುಪಯೋಗವನ್ನು ಪಡೆದುಕೊಂಡರು.

ಈ ಶಿಬಿರವನ್ನು ಪಡ್ಡಂದಡ್ಕ ಪರಿಸರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ), ಬಿ.ಸಿ. ಟ್ರಸ್ಟ್ ವೇಣೂರು ವಲಯ, ಕರಿಮಣೇಲು ,ಹೊಸಂಗಡಿ ,ಬಡಕೋಡಿ ಒಕ್ಕೂಟಗಳು ಹಾಗೂ ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ. ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ. ಹಾಲು ಉತ್ಪಾದಕರ ಸಹಕಾರಿ ಸಂಘ ನಿಯಮಿತ ಪೆರಿಂಜೆ. ಕ್ರಿಸ್ತಾರಾಜ ದೇವಾಲಯ, ಭಾರತೀಯ ಕಥೋಲಿಕ್ ಯುವ ಸಂಚಾಲನ ವೇಣೂರು ಘಟಕ, ಬಂಟರ ಗ್ರಾಮ ಸಮಿತಿ ಹೊಸಂಗಡಿ , ಬಡಕೋಡಿ. ಜನಸೇವಾ ಟ್ರಸ್ಟ್ ಪಡ್ಡಂದಡ್ಕ . ಮಂಜುನಾಥೇಶ್ವರ ಭಜನಾ ಮಂಡಳಿ ಪಡ್ಡಂದಡ್ಕ, ಸಮುದಾಯ ಭವನ ಪಡ್ಡಂದಡ್ಕ , ದ.ಕ. ಜಿಲ್ಲಾ ಕುಡಾಳ್ ದೇಶಸ್ತ ಆಧ್ಯ ಗೌಡ್ ಬ್ರಾಹ್ಮಣ ಸಂಘ ರಿ. ಮುಂತಾದ ಸಂಘ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನವು ಬೃಹತ್ ಉಚಿತ ಶಿಬಿರವನ್ನು ಆಯೋಜಿಸಿತು.

ಶಿಬಿರದ ನೇತೃತ್ವವನ್ನು ಜಗದೀಶ್ ನಾಯಕ್ ವೇಣೂರು, ಮುರಳೀಧರ ಪ್ರಭು ವಗ್ಗ, ದಿನೇಶ್ ನೂಯಿ, ಅರುಣ್ ಡಿಸೋಜಾ, ಜೆಸ್ವಿನ್ ಲೋಬೊ, ಸೀತಾರಾಮ್ ರೈ ಹಾಗೂ ಡಾ. ವಿಜಯಲಕ್ಷ್ಮಿ ನಾಯಕ್ ಮಂಗಳೂರು ಅವರು ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಮಂಗಳೂರು ಕೆಎಂಎಫ್ ನಿರ್ದೇಶಕರಾದ ಪ್ರಭಾಕರ ಉಲಿಮೇರು , ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸುಂದರ ಹೆಗ್ಡೆ , ದ ಕ. ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ದಯಾನಂದ ನಾಯಕ್ ಪುಂಜಾಲಕಟ್ಟೆ, ಕಾರ್ಯದರ್ಶಿಗಳಾದ ಸುಧಾಕರ ಪ್ರಭು ಪೆರ್ಮರೋಡಿ, ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಮುರಳೀಧರ ಪ್ರಭು ವಗ್ಗ, ನಿಕಟ ಪೂರ್ವ ಅಧ್ಯಕ್ಷರಾದ ವಿಜಯ ಶೆಣೈ ಕೊಡಂಗೆ ಹಾಗೂ ಹಿರಿಯರಾದ ಡೆಚ್ಹಾರು ಗಣಪತಿ ಶೆಣೈ, ಕೆನರಾ ಬ್ಯಾಂಕಿನ ವಿಶ್ರಾಂತ ಸೀನಿಯರ್ ಮ್ಯಾನೇಜರ್ ಅನಂತ ಪ್ರಭು ಮುಂತಾದವರು ಉಪಸ್ಥಿತರಿದ್ದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿ ಶಾಲಿನಿ ಕಾರ್ಯಕ್ರಮವನ್ನು ನಿರೂಪಿಸಿದರು. ಜಗದೀಶ ನಾಯಕ್ ಧನ್ಯವಾದವಿತ್ತರು.