ಶ್ರದ್ಧಾಂಜಲಿ

“ಮನುಷ್ಯನ ಜನ್ಮ ಆಕಸ್ಮಿಕ ಆದರೆ ಮರಣ ಅನಿವಾರ್ಯ” ಆದರೆ ಹುಟ್ಟು-ಸಾವುಗಳ ನಡುವಿನ ಬದುಕನ್ನು ಹೇಗೆ ಅರ್ಥಪೂರ್ಣವಾಗಿ ಸವೆಸಿದೆವೆಂಬುದೇ ಆ ವ್ಯಕ್ತಿಯ ಜೀವನದ ಮಾನದಂಡ. ಎಲ್ಲಾ ವ್ಯಕ್ತಿಗಳ ಜೀವನವು ಸುಖ-ಸಂತೋಷ ಗಳಿಂದ ತುಂಬಿ ತುಳುಕುತ್ತಿರುತ್ತದೆ ಎಂದೆಣಿ ಸುವುದು ನಿಜಕ್ಕೂ ಸುಳ್ಳು. ಪ್ರತೀ ವ್ಯಕ್ತಿಯು ಬದುಕಿನಲ್ಲಿ ಆತನದೇ ಮಟ್ಟದಲ್ಲಿ ಹಲ ವಾರು ಕಷ್ಟ-ಕಾರ್ಪಣ್ಯಗಳನ್ನು ಹೊಂದಿರು ತ್ತಾನೆ. ಕೆಲವು ನೈಸರ್ಗಿಕ ಮತ್ತೆ ಕೆಲವು ಮಾನವ ನಿರ್ಮಿತ. ಮಾನವ ನಿರ್ಮಿತ ಕಷ್ಟಗಳು ತಾತ್ಕಾಲಿಕ ಆದರೆ ಅದನ್ನು ಎದುರಿಸುವ ಛಾತಿ ಎಲ್ಲರಲ್ಲೂ ಇರುವುದಿಲ್ಲ. ಅದಕ್ಕೆ ಬುದ್ಧಿ, ಸಾಮರ್ಥ್ಯ ಹಾಗೂ ಛಲ ದಂತಹ ಗುಣಗಳು ಅಗತ್ಯ. ಮೇಲಿನ ಪೀಠಿಕೆಯು ಸ್ನಾತಕೋತ್ತರ ಪದವಿಯಲ್ಲಿ ಬಂಗಾರದ ಪದಕ ವಿಜೇತರಾಗಿ, ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯ ನೌಕರರ ತರಬೇತು ವಿಭಾಗದ ಮುಖ್ಯಸ್ಥರಾಗಿ 8 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ, ಇತ್ತೀಚೆಗೆ ದೈವಾಧೀನರಾದ ಶ್ರೀ ಹರಿಶ್ಚಂದ್ರ ಸಾಮಂತರಿಗೆ ಒಪ್ಪುವ ಮಾತು.

    ಸರಕಾರಿ ಹುದ್ದೆಯಲ್ಲಿ ಇರುವಾಗಲೇ ಸಮಾಜದ ಅಂಕುಡೊಂಕುಗಳಿಗೆ ಸಿಡಿದೇಳುತ್ತಿದ್ದ ಶ್ರೀ ಸಾಮಂತರು ಎಲ್ಲವೂ ತನ್ನ ಹಿಡಿತದಲ್ಲಿಲ್ಲ ಎಂಬುದನ್ನು ಮನಗಂಡು ಖಿನ್ನರಾಗುತ್ತಾರೆ. ಈ ಮಾನಸಿಕ ಖಿನ್ನತೆ ಅವರಿಗೆ ‘ಮಾನಸಿಕ ಅಸ್ವಸ್ಥ’ ಎಂಬ ಹಣೆಪಟ್ಟಿ ಲಗತ್ತಿಸಿ ಬಿಡುತ್ತದೆ.  ಇಂತಹ ಪರಿಸ್ಥಿತಿಯಲ್ಲಿ ಅವರ ಸ್ವಗೃಹವು ಬೆಂಕಿಗಾಹುತಿಯಾಗುತ್ತದೆ. ಅದೇ ವೇಳೆಗೆ ಅವರು ಪತ್ನೀ ವಿಯೋಗಕ್ಕೆ ತುತ್ತಾಗುತ್ತಾರೆ. ಉರಿಯುವ ಬೆಂಕಿಗೆ ಮತ್ತೆ ಮತ್ತೆ ತುಪ್ಪ ಸುರಿದಂತಾದ ಈ ಘಟನೆಗಳೊಂದಿಗೆ ಸಮಾಜದ ತಿರಸ್ಕಾರ, ತಾತ್ಸಾರ ಭಾವನೆಗಳೂ ಒಗ್ಗೂಡಿ ಸಂಪೂರ್ಣ ಜರ್ಜರಿತರಾಗಿ ಸಂಪೂರ್ಣವಾಗಿ ಬೀದಿ ಪಾಲಾಗುತ್ತಾರೆ. ಇರುವ ಓರ್ವ ಪುತ್ರಿಯೂ ಸಂಬಂಧಿಕರ ಅವಗಾಹನೆಯಲ್ಲಿ ಬೆಳೆಯುತ್ತಿರುವಾಗ, ಕಲಿಕೆಯಲ್ಲಿ ಚುರುಕಾಗಿದ್ದ ಆ ಬಾಲಕಿಯ ವಿದ್ಯಾಭ್ಯಾಸಕ್ಕಾಗಿ ಪ್ರತಿಷ್ಠಾನವು ಆಕೆಯನ್ನು ದತ್ತು ಸ್ವೀಕಾರ ಮಾಡಿತು. ಆಕೆಯ ವಿದ್ಯಾಭ್ಯಾಸದ ಎಲ್ಲಾ ಖರ್ಚು ವೆಚ್ಚಗಳನ್ನು ಪ್ರತಿಷ್ಠಾನವು ವಹಿಸಿಕೊಂಡ ಪರಿಣಾಮವಾಗಿ ಪ್ರತಿ ತರಗತಿಯಲ್ಲಿ ಪ್ರಥಮ ಶ್ರೇಣಿಯಲ್ಲೇ ಉತ್ತೀರ್ಣಳಾಗುತ್ತಾ ಬಂದಳು. ದ್ವಿತೀಯ ಪಿಯಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ  ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣಳಾದದ್ದನ್ನು ಮನಗಂಡ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನವು ಆಕೆಯ ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕಾಗಿ ಕೆನರಾ ಇಂಜಿನಿಯರಿಂಗ್ ಕಾಲೇಜಿಗೆ ಸೇರ್ಪಡೆಗೊಳಿಸಿತು. ಈಕೆ ಇಂಜಿನಿಯರಿಂಗ್ ಪದವಿಯಲ್ಲೂ ಉನ್ನತ ಶ್ರೇಣಯಲ್ಲಿ ಪಾಸಾಗುವ ಭರವಸೆಯನ್ನು ಹೊಂದಿರುತ್ತಾಳೆ.

    ಕಳೆದ ವರ್ಷ ಪ್ರತಿಷ್ಠಾನವು ಇರುವೈಲಿನ ಪಡಂಬೋಡಿ ಕುಟುಂಬದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಸಂಸಾರವೊಂದನ್ನು ಸುಸ್ಥಿರಗೊಳಿಸಿದ್ದು ಐತಿಹಾಸಿಕ ಕಾರ್ಯ ಕ್ರಮ. ಕುಟುಂಬದ ಎಲ್ಲಾ ಸದಸ್ಯರು ಮಾನಸಿಕ ಅಸ್ವಸ್ಥತೆಯಿಂದ ನರಳುತ್ತಿದ್ದುದನ್ನು ಅರಿತ ಪ್ರತಿಷ್ಥಾನದ ಪದಾಧಿಕಾರಿಗಳು ಅವರ ಮನೆಗೆ ಭೇಟಿ ಕೊಟ್ಟು, ಅವರ ಮನವೊಲಿಸಿ ಚಿಕಿತ್ಸೆಗಾಗಿ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ಸೇರಿಸಿ, ಸಕಾಲಿಕ ಚಿಕಿತ್ಸೆಯನ್ನು ಕೊಡಿಸಿ ಸಂಪೂರ್ಣ ಗುಣಮುಖರಾಗುವಂತೆ ಮಾಡಿದ್ದರು. ಅಷ್ಟೇ ಅಲ್ಲದೆ ಅವರ ಗುಡಿಸಲಿನಂತಹ ಮನೆಯ ಬದಲಿಗೆ ಸುಮಾರು 6 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತವಾದ ನಿವಾಸವನ್ನು ನಿರ್ಮಿಸಿ ಇಡೀ ಕುಟುಂಬ ನೆಲೆಗೊಳ್ಳುವಂತೆ ಮಾಡಿದರು. ಈ ಘನಕಾರ್ಯ ದಲ್ಲಿ ನೆರವಿತ್ತ ಎಲ್ಲಾ ಸಮಾಜ ಬಾಂಧವರಿಗೆ ಪ್ರತಿಷ್ಠಾನ ತನ್ನ ಕೃತಜ್ಞತೆಯನ್ನು ಸಲ್ಲಿಸುತ್ತದೆ.

    ಇದಾದ ನಂತರ ಆರೋಗ್ಯ ಕಾರ್ಯಕ್ರಮದಡಿ ಶ್ರೀ ಹರಿಶ್ಚಂದ್ರ ಸಾಮಂತರ ಮಾನಸಿಕ ಹಾಗೂ ದೈಹಿಕ ಅನಾರೋಗ್ಯವನ್ನು ಸರಿಪಡಿಸುವ  ಸಂಕಲ್ಪವನ್ನು ಪ್ರತಿಷ್ಠಾನ ಕೈಗೆತ್ತಿಕೊಂಡಿತು. ನಮ್ಮ ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಹತ್ತು-ಹಲವು ಕಾರ್ಯಕ್ರಮಗಳನ್ನು ಮಾಡು ತ್ತಿರುವ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನವು ಕಾರ್ಯಕರ್ತರ ಸಹಕಾರದೊಂದಿಗೆ ಶ್ರೀ ಸಾಮಂತ್‍ರವರನ್ನು ಕಳೆದ ವರ್ಷ ಎಪ್ರಿಲ್ ತಿಂಗಳಲ್ಲಿ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ಚಿಕಿತ್ಸೆ ಗಾಗಿ ಸೇರಿಸಲಾಯಿತು.

    ಜೀವನದಲ್ಲಿ ಎದ್ದ ಹಲವಾರು ಕಠಿಣ ಪರಿಸ್ಥಿತಿಗಳನ್ನು ಎದುರಿಸಲಾಗದೆ ಸೋತು-ಸೊರಗಿ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಶ್ರೀ ಸಾಮಂತರ ಸಂಪೂರ್ಣ ವೈದ್ಯಕೀಯ ತಪಾಸಣೆಯಲ್ಲಿ ಕಂಡು ಬಂದಿದ್ದೆಂದರೆ ಅವರು ಹೃದ್ರೋಗಿ ಕೂಡ ಆಗಿದ್ದರು. ಅಪೌಷ್ಟಿಕತೆಯ ಕಾರಣವಾಗಿ ಅವರ ಅಂಗಾಂಗಗಳೆಲ್ಲವೂ ಕ್ಷೀಣಿಸಿತ್ತು. ಆದರೂ ಛಲಬಿಡದ ಪ್ರತಿಷ್ಠಾನದ ಪದಾಧಿಕಾರಿಗಳು ಶ್ರೀ ಸಾಮಂತರನ್ನು ಆರೋಗ್ಯವಂತರನ್ನಾಗಿ ಮಾಡಲು ಹಗಲು-ಇರುಳು ಶ್ರಮಿಸಿದರು. ಇವರ ಪ್ರಾಮಾಣಿಕ ಪರಿಶ್ರಮಕ್ಕೆ ತಲೆದೂಗಿದ ಆಸ್ಪತ್ರೆ ಸಿಬ್ಬಂದಿ, ಅದರಲ್ಲೂ ಪ್ರಮುಖವಾಗಿ ಕ್ಷೇಮದ ಮಾನಸಿಕ ರೋಗ ವಿಭಾಗದ ಮುಖ್ಯಸ್ಥ ಡಾ|| ಸತೀಶ್ ರಾವ್, ಡಾ|| ಶ್ರೀನಿವಾಸ್ ಭಟ್ ಹಾಗೂ ಡಾ|| ನೀಲಾ ಶೆಣೈ ಅತ್ಯಂತ ಮುತುವರ್ಜಿಯಿಂದ ಚಿಕಿತ್ಸೆಯನ್ನು ಮುಂದುವರಿಸಿದರು. ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸುತ್ತಿದ್ದ ಶ್ರೀ ಸಾಮಂತರು ಕೂಡ ಆರೋಗ್ಯಪೂರ್ಣ ಜೀವನದತ್ತ ಮುಖ ಮಾಡಿದ್ದರು. ನಮ್ಮ ಶ್ರಮ ಫಲ ನೀಡುತ್ತಿದೆ ಎಂದು ಸಂಭ್ರಮಿಸುತ್ತಿರುವಾಗಲೇ ಶ್ರೀ ಸಾಮಂತರಿಗೊಂದು ಬಲವಾದ ಹೃದಯಾಘಾತವಾಯಿತು. ಇದೇ ಫೆಬ್ರವರಿ 27ರಂದು ಶ್ರೀಯುತರು ಇಹಲೋಕದ ವ್ಯವಹಾರ ಮುಗಿಸಿ ಪರಲೋಕದತ್ತ ತೆರಳಿದರು.

ದಿನಾಂಕ 27.02.2017 ರಂದು ದೈವಾದೀನರಾದ ಇರುವೈಲು ಹರಿಶ್ಚಂದ್ರ ಸಾಮಂತ್, ಇವರ ಅಂತ್ಯಕ್ರಿಯೆಯನ್ನು ಸಮಾಜದ ಪುರೋಹಿತರಾದ ಶ್ರೀ ಚಂದ್ರಹಾಸ್ ಭಟ್, ಇವರ ನೇತೃತ್ವದಲ್ಲಿ ಶಕ್ತಿನಗರದ ರುದ್ರಭೂಮಿಯಲ್ಲಿ ವಿಧಿ-ವಿಧಾನದ ಮೂಲಕ ನೆರವೇರಿಸಲಾಯಿತು.

 

ದಿನಾಂಕ 11.03.2017 ರಂದು ಶ್ರೀ ಕದ್ರಿ ಮಂಜುನಾಥ ದೇವಸ್ಥಾನದ ಅಭಿಷೇಕ್ ಮಂದಿರದಲ್ಲಿ, ಇವರ ವೈಕುಂಠ ಸಮಾರಾಧನೆ ಮತ್ತು ಶೃದ್ಧಾಂಜಲಿ ಸಭೆ ನಡೆಯಿತು.

“ನಾವು ಹುಟ್ಟುವಾಗ ಏನನ್ನೂ ತರುವುದಿಲ್ಲ, ಸಾಯುವಾಗ ಕೂಡ ಏನನ್ನೂ ಕೊಂಡು ಹೋಗುವುದಿಲ್ಲ. ಹುಟ್ಟು-ಸಾವುಗಳ ಮಧ್ಯೆ ದೇವರು ಕೊಟ್ಟ ಆಯುಷ್ಯದಲ್ಲಿ ನಾವು ಮಾಡಿದ ಪಾಪ-ಪುಣ್ಯದ ಫಲವನ್ನು ಮಾತ್ರ ಕೊಂಡು ಹೋಗುತ್ತೇವೆ. ಪುಣ್ಯ ಮಾಡಿದರೆ ಪುಣ್ಯದ ಫಲವನ್ನು ಮತ್ತು ಪಾಪ ಕರ್ಮಗಳನ್ನು ಮಾಡಿದರೆ ಪಾಪದ ಫಲದ ಪ್ರಾಯಶ್ಚಿತ್ತಕ್ಕಾಗಿ ದೇವರು ಐದು ‘ಗ’ ಕಾರಗಳ ಪ್ರಾಯಶ್ಚಿತ್ತ ಮಾರ್ಗಗಳಾದ ಗಂಗಾ ಸ್ನಾನ, ಗಾಯತ್ರಿ ಜಪ, ಗೀತಾ ಪ್ರವಚನೆ, ಗೋ ದಾನ ಮತ್ತು ಗೋವಿಂದ ನಾಮ ಸ್ಮರಣೆಗಳನ್ನು ತೋರಿಸಿದ್ದಾರೆ” ಎಂದು ಪುರೋಹಿತರಾದ ನಿತ್ಯಾನಂದ ಭಟ್ ತಿಳಿಸಿದರು.

ಇವರು ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದವರ ನೇತೃತ್ವದಲ್ಲಿ ನಡೆದ ದಿ. ಹರೀಶ್ಚಂದ್ರ ಸಾಮಂತ್‍ರವರ ವೈಕುಂಠ ಸಮಾರಾಧನೆ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ, ಅವರ ಜೀವನದಲ್ಲಿ ಅವರು ಅನುಭವಿಸಿದ ನೋವುಗಳನ್ನು ವಿವರಿಸಿದರು ಹಾಗೂ ಅವರಿಗೆ ದೇರಳೆಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ನೀಡಿದಂತಹ ಚಿಕಿತ್ಸೆಯ ಬಗ್ಗೆ ತಿಳಿಸಿದರು. ಮೃತÀರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ ಹಾಗೂ ಸದ್ಗತಿಯನ್ನು ಕರುಣಿಸಲಿ ಎಂದು ನೆರೆದಿರುವ ಸಮಾಜ ಬಾಂಧವರು ಒಂದು ನಿಮಿಷದ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿಯನ್ನು ಅರ್ಪಿಸಿದರು.

ಕದ್ರಿ ದೇವಸ್ಥಾನದ ಅಭಿಷೇಕ ಮಂದಿರದಲ್ಲಿ ಜರಗಿದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮೃತರ ಮಗಳಾದ ಕು. ಜ್ಯೋತಿ ಸಾಮಂತ್ ಹಾಗೂ ಸಂಬಂಧಿಕರು ಮತ್ತು ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಪದಾಧಿಕಾರಿಗಳು, ಸದಸ್ಯರು ಹಾಗೂ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

 

Eaknaath Takoor Shraddhanjali

‘’ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ’’ ವತಿಯಿಂದ ಸಾರಸ್ವತ್ ಬ್ಯಾಂಕಿನ ಅಧ್ಯಕ್ಷ, ಮಾಜಿ ಸಂಸದರು ಹಾಗೂ ಕುಡಾಳ್ ದೇಶಸ್ಥ ಆದ್ಯ ಗೌಡ್ ಮಹಾಮಂಡಲ ದಾಬೋಲಿ ಇದರ ಮಾಜಿ ಅಧ್ಯಕ್ಷರಾದ ದಿ.ಏಕನಾಥ್ ಠಾಕೂರ್ ಅವರಿಗೆ ಶ್ರದ್ದಾಂಜಲಿ ಕಾರ್ಯಕ್ರಮ ಜರಗಿತು. ಈ ಸಂದರ್ಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷರಾದ ಡಿ. ರಮೇಶ್‍ನಾಯಕ್, ಕಾರ್ಯಾಧ್ಯಕ್ಷರಾದ ಸಂಜಯ್ ಪ್ರಭು ಮತ್ತು ಸ್ಥಾಪಕ ಪ್ರಾಯೋಜಕರಾದ ಎಂ. ಎಂ. ಪ್ರಭು, ಕಾರ್ಯದರ್ಶಿ ಡಾ| ವಿಜಯಲಕ್ಷ್ಮಿ ನಾಯಕ್, ರವೀಂದ್ರ ನಾಯಕ್ ಶಕ್ತಿನಗರ ಉಪಸ್ಥಿತರಿದ್ದು ಶ್ರೀಯುತ ದಿ.ಏಕನಾಥ್ ಠಾಕೂರ್ ಸಮಾಜಕ್ಕೆ ನೀಡಿದ ಕೊಡುಗೆಗಳ ಬಗ್ಗೆ ನೆನಪಿಸಿಕೊಳ್ಳಲಾಯಿತು.