
ಪುತ್ತೂರಿನಲ್ಲಿ ಬೃಹತ್ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಆರೋಗ್ಯ ಜಾಗೃತಿ ಶಿಬಿರಕ್ಕೆ ಭರ್ಜರಿ ಸ್ಪಂದನೆ
ಪುತ್ತೂರು, ಜನವರಿ 11:
“ಆರೋಗ್ಯವೇ ಸಮಾಜದ ಮೊದಲ ಆದ್ಯತೆ” ಎಂಬ ಉದಾತ್ತ ಧ್ಯೇಯದೊಂದಿಗೆ ನಟರಾಜ ಸಭಾಭವನ, ಪುತ್ತೂರು (ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರುಗದ್ದೆ) ಇಲ್ಲಿ ಕೆಎಂಸಿ ಆಸ್ಪತ್ರೆ, ಮಂಗಳೂರು ಇವರ ಸಹಭಾಗಿತ್ವದಲ್ಲಿ ಹಾಗೂ ವಿವಿಧ ಸಂಘ–ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಬೃಹತ್ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಆರೋಗ್ಯ ಮಾಹಿತಿ ಶಿಬಿರವು ಸಾರ್ವಜನಿಕರ ಅಪಾರ ಸ್ಪಂದನೆಯೊಂದಿಗೆ ಯಶಸ್ವಿಯಾಗಿ ನೆರವೇರಿತು.

ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 2 ರವರೆಗೆ ನಡೆದ ಈ ಶಿಬಿರದಲ್ಲಿ ನೂರಾರು ನಾಗರಿಕರು ಕುಟುಂಬ ಸಮೇತರಾಗಿ ಭಾಗವಹಿಸಿ ಆರೋಗ್ಯ ಸೇವೆಗಳ ಸದುಪಯೋಗ ಪಡೆದುಕೊಂಡರು. ಸಾಮಾನ್ಯ ಆರೋಗ್ಯ ತಪಾಸಣೆ, ಎಲುಬು ಮತ್ತು ಕೀಲು ರೋಗ, ಕಿವಿ–ಮೂಗು–ಗಂಟಲು, ಕ್ಯಾನ್ಸರ್ ತಪಾಸಣೆ, ಕಣ್ಣು, ಹೃದಯ ರೋಗ, ಸ್ತ್ರೀ ರೋಗ, ಮಕ್ಕಳ ರೋಗ ವಿಭಾಗಗಳ ತಜ್ಞ ವೈದ್ಯರಿಂದ ಸಂಪೂರ್ಣ ಉಚಿತ ತಪಾಸಣೆ ನಡೆಸಲಾಯಿತು. ಜೊತೆಗೆ ಬಿ.ಪಿ. ಹಾಗೂ ಮಧುಮೇಹ ಪರೀಕ್ಷೆ, ಉಚಿತ ಔಷಧ ವಿತರಣೆ, ವೈದ್ಯರ ಸಲಹೆಯ ಮೇರೆಗೆ ಉಚಿತ ಇಸಿಜಿ ತಪಾಸಣೆ ಹಾಗೂ ರಿಯಾಯಿತಿ ದರದಲ್ಲಿ ಓದುವ ಕನ್ನಡಕ ವಿತರಣೆ ಮಾಡಲಾಯಿತು. ಪುರುಷರು ಮತ್ತು ಸ್ತ್ರೀಯರಿಗೆ ಪ್ರತ್ಯೇಕ ತಪಾಸಣೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಮಹಿಳೆಯರು ಹಾಗೂ ಹಿರಿಯ ನಾಗರಿಕರಿಂದ ವಿಶೇಷ ಮೆಚ್ಚುಗೆ ವ್ಯಕ್ತವಾಯಿತು.

ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದವರಿಗೆ ಕೆಎಂಸಿ ಆಸ್ಪತ್ರೆಯ ಹಸಿರು ಕಾರ್ಡ್ಗಳನ್ನು ವಿತರಿಸಲಾಗಿದ್ದು, ಈ ಮೂಲಕ ಶಸ್ತ್ರಚಿಕಿತ್ಸೆ ಹಾಗೂ ಒಳರೋಗಿ ಚಿಕಿತ್ಸೆಗೆ ವಿಶೇಷ ರಿಯಾಯಿತಿಗಳನ್ನು ಪಡೆಯುವ ಅವಕಾಶ ಕಲ್ಪಿಸಲಾಯಿತು. ಆರೋಗ್ಯ ಜಾಗೃತಿ ಮಾಹಿತಿ ಹಾಗೂ ಅಗತ್ಯ ವೈದ್ಯಕೀಯ ಸಲಹೆಗಳು ಶಿಬಿರದ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದ್ದವು.

ಶಿಬಿರವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಪುತ್ತೂರಿನ ಜನಪ್ರಿಯ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಅವರು ಮಾತನಾಡಿ, “ಇಂದಿನ ವೇಗದ ಜೀವನಶೈಲಿಯಲ್ಲಿ ಆರೋಗ್ಯವನ್ನು ನಿರ್ಲಕ್ಷ್ಯ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಹಿತ ಹಾಗೂ ಮಿತ ಆಹಾರ, ನಿಯಮಿತ ವ್ಯಾಯಾಮ ಮತ್ತು ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಕೊಂಡರೆ ಅನೇಕ ಗಂಭೀರ ರೋಗಗಳನ್ನು ತಪ್ಪಿಸಬಹುದು. ಇಂತಹ ಉಚಿತ ಆರೋಗ್ಯ ಶಿಬಿರಗಳ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು” ಎಂದು ಕರೆ ನೀಡಿದರು.

ಕಾರ್ಯಕ್ರಮದ ಪ್ರಸ್ತಾವನೆಯನ್ನು ನೀಡಿದ ಶ್ರೀ ಡಿ. ರಮೇಶ ನಾಯಕ್ ಮೈರಾ ಅವರು ಮಾತನಾಡಿ, “ರೋಗ ಬಂದ ನಂತರ ಪಶ್ಚಾತಾಪ ಪಡುವುದಕ್ಕಿಂತ ರೋಗ ಬರುವ ಮುನ್ನ ತಪಾಸಣೆ ಮಾಡಿಸಿಕೊಳ್ಳುವುದು ಜಾಣತನ. ಇಂದು ನಡೆಯುತ್ತಿರುವ ಈ ಆರೋಗ್ಯ ತಪಾಸಣೆ ಹಾಗೂ ಮಾಹಿತಿ ಶಿಬಿರವು ಸಮಾಜದಲ್ಲಿ ಆರೋಗ್ಯ ಅರಿವು ಮೂಡಿಸುವ ಮಾನವೀಯ ಸೇವೆಯಾಗಿದೆ. ಆರೋಗ್ಯವೇ ಜೀವನದ ಅಡಿಪಾಯ; ಆರೋಗ್ಯದ ಅರಿವು ಸಮಾಜದ ಬಲ, ಆರೋಗ್ಯ ಸೇವೆ ಸಮಾಜದ ಕರ್ತವ್ಯ” ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀ ಈಶ್ವರ ಭಟ್ ಪಂಜಿಗುಡ್ಡೆ, ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ಅಧ್ಯಕ್ಷರಾದ ಬೆಳ್ಳಿಪಾಡಿ ಸುಭಾಶ್ ರೈ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ, ಕಾರ್ಯಾಧ್ಯಕ್ಷ ತಾರನಾಥ, ಪುತ್ತೂರಿನ ಜನಪ್ರಿಯ ವೈದ್ಯರಾದ ಡಾ. ಭಾಸ್ಕರ್ ನಾಯಕ್, ಕೆಎಂಸಿ ಆಸ್ಪತ್ರೆಯ ಹೃದಯ ರೋಗ ತಜ್ಞರಾದ ಡಾ. ಐರಿಷ್ ಶೆಟ್ಟಿ, ಡಾ. ಶಿವಪ್ರಕಾಶ್ ನಾಯಕ್, ಪುತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಸುಶ್ಮಿತಾ ನಾಯಕ್, ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಮುರಳೀಧರ ಪ್ರಭು, ಸುರೇಂದ್ರ ನಾಯಕ್ ನೂಜಿನಡ್ಕ, ರವೀಂದ್ರ ನಾಯಕ್ ಕುಂಟಲ್ಪಾಡಿ, ಕೊಡಂಗೆ ವಿಜಯ ಶೆಣೈ, ಅನಂತ ಪ್ರಭು ಮರೋಳಿ, ದಿನೇಶ್ ನಾಯಕ್ ಕಾವಳಕಟ್ಟೆ, ಗಣೇಶ್ ನಾಯಕ್, ರಾಜೇಶ್ ನಾಯಕ್ ಬೋಳಂಗಡಿ, ಉಪೇಂದ್ರ ನಾಯಕ್ (ಮಂಗಳೂರು), ರಮೇಶ್ ಸಾಮಂತ್, ಶ್ರೀಮತಿ ಸುಜಾತ ಸಾಮಂತ್, ಗಣೇಶ್ ಪ್ರಭು, ಓಮ, ದಿನೇಶ್ ನಾಯಕ್ ಕಾವಳಕಟ್ಟೆ, ಶ್ರೀ ದೇವಸ್ಥಾನದ ಆಡಳಿತ ಮಂಡಳಿಯ ಮುಕ್ತೇಸರರಾದ ಶ್ರೀ ವಿನಯ ಮುಂತಾದವರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಗೌರವ ಹೆಚ್ಚಿಸಿದರು.

ಈ ಬೃಹತ್ ಆರೋಗ್ಯ ಶಿಬಿರವು ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ, ದಕ್ಷಿಣ ಕನ್ನಡ ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘ, ವ್ಯವಸ್ಥಾಪನ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು, ಜಿಲ್ಲಾ ಕೃಷಿಕ ಸಮಾಜ ದಕ್ಷಿಣ ಕನ್ನಡ, ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಹಾಗೂ ಕೆಎಂಸಿ ಆಸ್ಪತ್ರೆ, ಅತ್ತಾವರ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಯಶಸ್ವಿಯಾಗಿ ನಡೆಯಿತು. ಈ ಆರೋಗ್ಯ ಶಿಬಿರವು ಪುತ್ತೂರು ನಗರದ ಶ್ರೀ ರಾಜಾರಾಮ ಪ್ರಭು ಕಲ್ಲಗುಡ್ಡೆ ಇವರ ನೇತೃತ್ವದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.





