ಉನ್ನತಿ – ಪರಿಣತಿ – ಪ್ರಗತಿ -2018

ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದಿಂದ 3 ದಿನಗಳ ಸನಿವಾಸ ವ್ಯಕ್ತಿತ್ವ ವಿಕಸನ ಶಿಬಿರ -ಉನ್ನತಿ-2018’ ಮತ್ತು ‘ಪರಿಣತಿ-2018’ ಹಾಗೂ ‘ಪ್ರಗತಿ-2018’ ಒಂದು ದಿನದ ಕಾರ್ಯಾಗಾರ

ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನವು ವಿದ್ಯಾರ್ಥಿಗಳಲ್ಲಿ ನಾಯಕತ್ವ ಮತ್ತು ಕೌಶಲ್ಯ ಅಭಿವೃದ್ಧಿ ಬೆಳೆಸುವ ಉದ್ದೇಶದಿಂದ ಸುಮಾರು 4 ವರ್ಷಗಳಿಂದ, ಸನಿವಾಸ ಕಾರ್ಯಾಗಾರವನ್ನು ಹಮ್ಮಿಕೊಂಡು ಬರುತ್ತಿದೆ. ಈ ನಿಟ್ಟಿನಲ್ಲಿ, 2ನೇ ಮತ್ತು 3ನೇ ವರ್ಷದ ಪದವಿ ವಿದ್ಯಾರ್ಥಿಯರಿಗೆ ‘ಉನ್ನತಿ-2018’ ಮತ್ತು ‘ಪರಿಣತಿ-2018’ 3 ದಿನಗಳ ಸನಿವಾಸ ವ್ಯಕ್ತಿತ್ವ ವಿಕಸನ ಕಾರ್ಯಾಗಾರವನ್ನು ದಿನಾಂಕ 02.08.2018 ರಿಂದ 05.08.2018ರವರೆಗೆ ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಅದೇ ರೀತಿಯಲ್ಲಿ ಪದವಿ-ಪೂರ್ವ ವಿದ್ಯಾರ್ಥಿಗಳಿಗೆ ಒಂದು ದಿನದ ‘ಪ್ರಗತಿ-2018’ ಕಾರ್ಯಾಗಾರವನ್ನು ತಾ. 05.08.2018ರಂದು ಏರ್ಪಡಿಸಲಾಗಿತ್ತು.

ಕಾರ್ಯಾಗಾರದಲ್ಲಿ ಪರಿಣಾಮಕಾರಿ ಸಂವಹನ, ಒತ್ತಡ, ಸಮಯ ನಿರ್ವಹಣೆ, ಆತ್ಮ ವಿಶ್ವಾಸವನ್ನು ಬೆಳೆಸಿಕೊಳ್ಳುವ ಬಗೆ, ಧೈರ್ಯದಿಂದ ಕಾರ್ಯಗಳನ್ನು ಮಾಡುವ, ಇನ್ನೊಬ್ಬರ ಜತೆ ವರ್ತಿಸುವ, ಸಾಮರಸ್ಯದಿಂದಿರುವ, ತಾಳ್ಮೆ, ಒಗ್ಗಟ್ಟು, ಹೊಂದಾಣಿಕೆ, ಜೀವನ ಕೌಶಲಗಳು, ಸಂದರ್ಶನದ ಪೂರ್ವ ತಯಾರಿ, ವೃತ್ತಿ ನಿಲುವುಗಳು, ಗುಂಪು ಚರ್ಚೆ, ಶಿಷ್ಟವರ್ತನೆಗಳು ಮತ್ತು ಅಣುಕು ಸಂದರ್ಶನದ ಮೂಲಕ ಕಾರ್ಯಕ್ರಮಗಳನ್ನು ಆಯೋಜಿಸುವ, ಸಂದರ್ಶನ ಎದುರಿಸುವ ತಂತ್ರವನ್ನು ಸಂಪನ್ಮೂಲ ವ್ಯಕ್ತಿ ಶ್ರೀಮತಿ ಶವೀನಾ, ಪ್ರಾತ್ಯಕ್ಷಿಕೆಯ ಮುಖಾಂತರ ತರಬೇತಿ ನೀಡಿದರು.  ಆರಂಭದಲ್ಲಿ ವಿಶ್ವ ಕೊಂಕಣಿ ಕೇಂದ್ರದ ನಿರ್ದೇಶಕರಾದ ಶ್ರೀ ಗುರುದತ್ತ್  ಬಂಟ್ವಾಳ್ಕರ್ ರವರು, ಶಿಬಿರದ ನಿಯಮಗಳನ್ನು ವಿವರಿಸಿದರು. ಶಿಬಿರದ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಲ್ಲಿ ವಿ.ಕೊ.ಕೇಂದ್ರದ ಶ್ರೀಮತಿ ಸಹನಾ ಮತ್ತು ಶ್ರೀಮತಿ ಗೀತಾ ಸಾಮಂತ್ ಸಹಕರಿಸಿದರು. ಅಂತೆಯೇ ಕಾರ್ಯಾಗಾರದ ಸಮಾರೋಪ ಸಮಾರಂಭವು ತಾ. 05.08.2018ರಂದು ನೇರವೇರಿತು.

“ ಕೊಂಕಣಿ ಭಾಷೆ, ಸಂಸ್ಕøತಿ, ಸಾಹಿತ್ಯ ಮತ್ತು ಒಟ್ಟು ಸಮಗ್ರ ಜೀವನ ಪದ್ಧತಿಯ ಉಳಿವು ಹಾಗೂ ಬೆಳವಣಿಗಾಗಿ ಉದಯಗೊಂಡ ಸೌಧವೇ ‘ವಿಶ್ವ ಕೊಂಕಣಿ ಕೇಂದ್ರ’. ಉತ್ಸಾಹದ ಚಿಲುಮೆ, ಮೇರು ವ್ಯಕ್ತಿತ್ವದ ಮಾರ್ಗದರ್ಶಕರೂ ಆದ ಕೊಂಕಣಿ ಸರದಾರ್ ಶ್ರೀ ಬಸ್ತಿ ವಾಮನ್ ಶೆಣೈಯವರ ನೇತೃತ್ವ, ಧೀಮಂತ ವ್ಯಕ್ತಿತ್ವ-ಆರ್ಥಿಕ ತಜ್ಞ ಶ್ರೀ ಡಿ.ವಿ.ಮೋಹನ್ ದಾಸ್ ಪೈ, ಶ್ರೀ ದಯಾನಂದ ಪೈ, ಶ್ರೀ ರಾಮ್‍ದಾಸ್ ಕಾಮತ್, ಹಾಗೂ ಶ್ರೀ ಪ್ರದೀಪ್ ಪೈ ಅಂತಹವರ ನಾಯಕತ್ವ, ಮಾರ್ಗದರ್ಶನ ಹಾಗೂ ಸಹಾಯ, ಸಹಕಾರಗಳೊಂದಿಗೆ ಭಾಷೆ, ಸಂಸ್ಕøತಿ ಮತ್ತು ಸಾಹಿತ್ಯದ ಬೆಳವಣಿಗೆಗೆ ಶಿಕ್ಷಣ ಮತ್ತು ಔದ್ಯೋಗಿಕ ಕ್ಷೇತ್ರವೇ ಅಡಿಪಾಯ ಎಂದು ಅರಿತು ಪ್ರಥಮ ಪ್ರಾಶಸ್ತ್ಯವನ್ನು ನೀಡಿದರು. ಅದಕ್ಕೆ ಪೂರಕವಾಗಿ ದಕ್ಷತೆ, ಬದ್ಧತೆ, ಮತ್ತು ಕರ್ತವ್ಯನಿಷ್ಠೆಯಿಂದ ದುಡಿಯುತ್ತಿರುವ ಶ್ರೀ ಗುರುದತ್ತ ಬಂಟ್ವಾಳ್ಕರ್ ಅವರ ನಾಯಕತ್ವದ ಪ್ರೇರಣೆಯಿಂದ ಎಲ್ಲಾ ಕಾರ್ಯ ಯೋಜನೆಗಳನ್ನು ಅಚಲ ಶ್ರದ್ಧೆಯಿಂದ ನಿಯಮಾನುಸಾರ ಶಿಸ್ತು ಬದ್ಧರಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಅವರೆಲ್ಲರ ಕಾರ್ಯ ತತ್ಪರತೆ ಮತ್ತು ದೂರದೃಷ್ಟಿಯಿಂದ ಕೊಂಕಣಿ ಸಮುದಾಯದ ಅಭಿವೃದ್ಧಿಗಾಗಿ ಸುಮಾರು 10 ವರ್ಷಗಳಿಂದ ಸೇವಾ ಕಾರ್ಯ ಯೋಜನೆಗಳನ್ನು ಹಮ್ಮಿಕೊಂಡು ಕಾರ್ಯಗತಗೊಳಿಸುತ್ತಿರುವ ವಿಶ್ವ ಕೊಂಕಣಿ ಕೇಂದ್ರ, ಈಗ ವಿಶ್ವ ವಿಖ್ಯಾತವಾಗಿದೆ’ ಎಂದು ಹೇಳಲು ಅಭಿಮಾನ ಪಡುತ್ತಿದ್ದೇವೆ. ಈ ಸಂಸ್ಥೆಯ ಸಹಾಯ, ಸಹಕಾರ ಮತ್ತು ಮಾರ್ಗದರ್ಶನದಿಂದ ನಮ್ಮ ಸಮುದಾಯದ ಯುವ ಪ್ರತಿಭೆಗಳಲ್ಲಿ ಪ್ರಸ್ತುತ: ಸ್ಪರ್ಧಾತ್ಮಕ ಜಗತ್ತಿನಲ್ಲಿ ಆತ್ಮವಿಶ್ವಾಸದಿಂದ ಮುನ್ನುಗುವ ಮನೋಸ್ಥೈರ್ಯ ಬೆಳೆದಿದೆ.” ಎಂದು ಪ್ರತಿಷ್ಠಾನದ ನಿಕಟಪೂರ್ವ ಅಧ್ಯಕ್ಷ ಶ್ರೀ ರಮೇಶ್ ನಾಯಕ್ ಮೈರಾ ಅಭಿಪ್ರಾಯ ವ್ಯಕ್ತಪಡಿಸುತ್ತಾ, ವಿಶ್ವ ಕೊಂಕಣಿ ಕೇಂದ್ರ ಹಾಗೂ ಎಲ್ಲಾ ಪದಾಧಿಕಾರಿಗಳನ್ನು ಪ್ರತಿಷ್ಠಾನದ ಪರವಾಗಿ ಅಭಿನಂದಿಸಿದರು.

“ಇಂದಿನ ಹೊಸ ಹೊಸ ಸಂಶೋಧನೆ, ಆವಿಷ್ಕಾರ ಮತ್ತು ಟೆಕ್ನಾಲಜಿಗಳ ಅಭಿವೃದ್ಧಿ, ಬದಲಾವಣೆ, ಮತ್ತು ಅದರ ವೇಗ ಇದರ ಮಧ್ಯೆ ಅದಕ್ಕೆ ಹೊಂದಿಕೊಂಡು ಬದುಕನ್ನು ಸಾಗಿಸುವುದೇ ಬಹು ದೊಡ್ಡ ಸವಾಲು. ನಮ್ಮ ಯುವ ಜನಾಂಗ ಶಿಕ್ಷಣದ ಜತೆಗೆ ವ್ಯಕ್ತಿತ್ವ ವಿಕಸನ, ಉತ್ತಮ ನಾಯಕತ್ವ ಹಾಗೂ ಕೌಶಲ್ಯ ಅಭಿವೃದ್ಧಿ ಹೊಂದಬೇಕು. ಪ್ರತಿಷ್ಠಾನದ ಪ್ರಯತ್ನದಿಂದ ಕು.ದೇ.ಆದ್ಯ ಗೌಡ್ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಾಗಾರಗಳಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆತಿದೆ. ಇದರಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳೆಲ್ಲರಿಗೂ ಅಭಿನಂಧಿಸುತ್ತಾ, ದಿನ ನಿತ್ಯದ ಜೀವನದಲ್ಲಿ ಇಲ್ಲಿ ಪಡೆದ ಜ್ಞಾನ ಮತ್ತು ಕೌಶಲವನ್ನು ದೃಢ ಸಂಕಲ್ಪದಿಂದ ಅನುಷ್ಠಾನಕ್ಕೆ ತಂದಾಗ, ತಮ್ಮ ಭವಿಷ್ಯ ಯಶಸ್ವೀಯಾಗಿ ಮುನ್ನಡೆಸಬಹುದು” ಎಂದು ವಿಶ್ವ ಕೊಂಕಣಿ ಕೇಂದ್ರದ ನಿರ್ದೇಶಕರಾದ ಗುರುದತ್ತ್ ಬಂಟ್ವಾಳ್ಕರ್ ಶುಭ ಹಾರೈಸಿದರು.
ಪ್ರತಿಷ್ಠಾನದ ಸಲಹೆಗಾರರಾದ ಡಾ. ಪ್ರವೀಣ್‍ಚಂದ್ರ ನಾಯಕ್ ಕಾರ್ಯಾಗಾರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಪ್ರೋತ್ಸಾಹಿಸಿದರು.

ಕಾರ್ಯಾಗಾರದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಕು. ಆಕಾಂಕ್ಷಾ, ಕೈಕಂಬ ಮತ್ತು ಕು. ವಿಕ್ಷೀತಾ ಶಂಬೂರು (ಉತ್ತಮ ಕಾರ್ಯಕ್ರಮ ನಿರೂಪಣೆ) ಹಾಗೂ ರಾಮಕೃಷ್ಣ ಕಲ್ಲೇರಿ (ಉತ್ತಮ ಭಾಷಣಗಾರ) ಇವರುಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಶಿಬಿರಾರ್ಥಿಗಳಾದ ದುರ್ಗಾನಂದ ಶೆಣೈ ಸಿದ್ಧಕಟ್ಟೆ, ಋಷಿಕೇಶ್, ದೀಕ್ಷಾ ಪ್ರಭು ಉಡುಪಿ, ದಿತೇಶ್ ಇರುವೈಲು, ರಶ್ಮೀತಾ ಪುತ್ತೂರು, ಶಿಬಿರದ ಅನುಭವಗಳನ್ನು ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಶ್ರೀ ಗಿರೀಶ್ ಪ್ರಭು, ಶ್ರೀಮತಿ ಶೀತಲ್ ಪ್ರಭು, ಮತ್ತು ಶ್ರೀ ಅನಂತ್ ಪ್ರಭು ಮರೋಳಿ ಉಪಸ್ಥಿತರಿದ್ದರು.

ಕು. ಆಕಾಂಕ್ಷಾ, ಕೈಕಂಬ ಸ್ವಾಗತಿಸಿ, ರಾಜೇಶ್ ನಾಯಕ್ ವಂದಿಸಿದರು. ಕು. ವಿಕ್ಷೀತಾ ಶಂಬೂರು ಕಾರ್ಯಕ್ರಮ ನಿರೂಪಿಸಿದರು.