ಪಾಣೆಮಂಗಳೂರಿನಲ್ಲಿ ನೃತ್ಯ ಸಂಧ್ಯಾ ಕಾರ್ಯಕ್ರಮ- ವೃಕ್ಷ ಅಭಿಯಾನಕ್ಕೆ ಸಾಲು ಮರದ ತಿಮ್ಮಕ್ಕ ಚಾಲನೆ
‘ಸಸ್ಯ ಪೋಷಣೆ, ಸಂರಕ್ಷಣೆ ಮೂಲಕ ರಾಜ್ಯಾದ್ಯಂತ ಮನೆಮಾತಾಗಿರುವ ಶತಾಯುಷಿ ಡಾ. ಸಾಲು ಮರದ ತಿಮ್ಮಕ್ಕ, ಬಿ.ಸಿ.ರೋಡ್ ಸಮೀಪ ಪಾಣೆಮಂಗಳೂರಿನ ಎಸ್.ವಿ.ಎಸ್ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ 31.12.2017ರಂದು, ಪುತ್ತೂರಿನ ಶ್ರೀ ದೇವಿ ನೃತ್ಯಾರಾಧನಾ ಕೇಂದ್ರದ ‘ನೃತ್ಯ ಸಂಧ್ಯಾ’ ಕಾರ್ಯಕ್ರಮದ ‘ವೃಕ್ಷ ಅಭಿಯಾನ’ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಹಾಗೂ ನಟರಾಜ ವಿಗ್ರಹಕ್ಕೆ ದೀಪ ಬೆಳಗಿಸುವುದರೊಂದಿಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ‘ಒಬ್ಬ ಹೆಣ್ಣು ಮಗಳಾಗಿ ಮಕ್ಕಳಿಲ್ಲದ ನಮ್ಮ ಸಂಸಾರದಲ್ಲಿ ಮರಗಳೇ ನಮಗೆ ಮಕ್ಕಳಾಗಿದ್ದವು. ನನ್ನ ಪತಿ ಮತ್ತು ನಾನು, 4 ಕಿ.ಮೀ, ಉದ್ದಕ್ಕೆ ಆಲದ ಸಸಿಗಳನ್ನು ರಸ್ತೆ ಬದಿ ನೆಟ್ಟು ನೀರು ಹಾಕಿ ಪೋಷಿಸಿದ್ದೇವೆ. ಇವತ್ತು ಅವುಗಳು ಹೆಮ್ಮರವಾಗಿ ಬೆಳೆದಿವೆ. ಅವುಗಳನ್ನು ನೋಡಿ ಬಹಳ ಸಂತೋಷವಾಗುತ್ತದೆ.” ಎಂದರು. ಊಟಕ್ಕಿಲ್ಲದ ಬಡತನದ ಮಧ್ಯೆ ಸರಕಾರದ ಸವಲತ್ತುಗಳಿಲ್ಲದೆ ಬಾಲ್ಯದಿಂದಲೇ ಈ ಕೆಲಸಗಳನ್ನು ಮಾಡಿ ನಮಗೆ ಅಭ್ಯಾಸವಾಗಿದೆ. ಸಮಾಜ, ಸಂಘ-ಸಂಸ್ಥೆಗಳು ನಮ್ಮನ್ನು ಗುರುತಿಸಿವೆ, ನನಗೆ ನಿಜವಾಗಿಯೂ ಸಂತೋಷವಾಗುತ್ತಿದೆ” ಎಂದರು.
ಈ ಕಾರ್ಯಕ್ರಮದಲ್ಲಿ ಯಕ್ಷಗಾನ ಕ್ಷೇತ್ರದ ಸಾಧಕ ಭಾಗವತ ಪಟ್ಲ ಶ್ರೀ ಸತೀಶ್ ಶೆಟ್ಟಿ, ಭರತನಾಟ್ಯಗುರು, ಶ್ರೀಮತಿ ನಯನ ಸತ್ಯನಾರಾಯಣ, ನಾಡೋಜ ಸಾಲು ಮರದ ತಿಮ್ಮಕ್ಕ ಹೀಗೆ ಮೂವರು ಸಾಧಕರುಗಳಿಗೆ ಸನ್ಮಾನಿಸಲಾಯಿತು.
ಈ ಸಂದರ್ಭ ಸುಮಾರು 150 ವಿದ್ಯಾರ್ಥಿಗಳಿಗೆ ಸಸಿ ವಿತರಿಸಿದ ಅವರು, ಪ್ರತಿಯೊಬ್ಬ ಮಕ್ಕಳಿಗೂ ‘ಕೇವಲ ಗಿಡ ನೆಡುವುದಲ್ಲ, ಅದನ್ನು ಸಾಕಿ ಸಲಹಬೇಕು’ ಎಂಬ ಕಿವಿ ಮಾತು ಹೇಳಿದರು.
ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ರಮೇಶ್ ನಾಯಕ್ ಮೈರ, ರಾಜ್ಯ ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯ ಪ್ರಭಾ ಚಿಲ್ತಡ್ಕ, ಕಟೀಲು ದೇವಸ್ಥಾನದ ಅನುವಂಶಿಕ ಅರ್ಚಕ ವೆಂಕಟ್ರಮಣ ಅಸ್ರಣ್ಣ, ಪರಿಸರ ಪ್ರೇಮಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಶ್ರೀ ಮಾಧವ ಉಳ್ಳಾಲ್, ಪಿಲಾತ್ತಬೆಟ್ಟು ಶಶಾಂಕ್ ಕ್ಯಾಶ್ಯು ಇಂಡಸ್ಟ್ರೀಸ್ ಮಾಲಕ ಶ್ರೀ ಪಿ. ಹರೀಂದ್ರ ಪೈ, ಮುಂತಾದವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಎಸ್,ವಿ.ಎಸ್ ಶಾಲಾ ಸಂಚಾಲಕ ಶ್ರೀ ವೆಂಕಟ್ರಾಯ ಶೆಣ್ಯೆ ಸಭಾಧ್ಯಕ್ಷತೆ ವಹಿಸಿದ್ದರು.
ಕಲಾ ಕೇಂದ್ರದ ಸಂಚಾಲಕ ಶ್ರೀ ಉದಯ್ ವೆಂಕಟೇಶ್ ಸ್ವಾಗತಿಸಿದರು. ನೃತ್ಯ ನಿರ್ದೇಶಕ ಶ್ರೀಮತಿ ರೋಹಿಣಿ ಉದಯ್, ಪ್ರಸ್ತಾವನೆ ನೀಡಿದರು. ಶ್ರೀ ಅರುಣ್ ಉಳ್ಳಾಲ್ ಕಾರ್ಯಕ್ರಮ ನಿರ್ವಹಿಸಿದರು. ಪ್ರತಿಷ್ಠಾನದಿಂದ ಡಾ. ವಿಜಯಲಕ್ಷ್ಮೀ ನಾಯಕ್, ಶ್ರೀ ನಂದಕಿಶೋರ್ ನಾಯಕ್, ನೇರಳೆಕೋಡಿ ಶ್ರೀ ಗೋಪಾಲ್ ಪ್ರಭು, ಶ್ರೀಮತಿ ಕವಿತಾ ಕೆ. ಪ್ರಭು, ಶ್ರೀ ಕರುಣಾಕರ್ ಪ್ರಭು ಬಾಯಿಲ, ಹಾಗೂ ಶ್ರೀಮತಿ ಜಯಲಕ್ಮೀ ಪ್ರಭು, ಉಪಸ್ಥಿತರಿದ್ದರು.