ಪುರುಷರಕಟ್ಟೆ
, ಅ.26: ಬೃಹತ್ ಉಚಿತ ಆರೋಗ್ಯ ಕಣ್ಣು ತಪಾಸಣಾ ಮತ್ತು ಮಾಹಿತಿ ಹಾಗೂ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು. ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ), ಶ್ರೀ ಗುರು ಪೂರ್ಣಾನಂದ ಭಜನಾ ಮಂದಿರ ಪುರುಷರಕಟ್ಟೆ, ದ.ಕ. ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘ (ರಿ), ಲಯನ್ಸ್ ಕ್ಲಬ್ ಪುತ್ತೂರುದ ಮುತ್ತು, ಕೆಎಂಸಿ ಆಸ್ಪತ್ರೆ ಅತ್ತಾವರ ಮಂಗಳೂರು ಹಾಗೂ ಊರಿನ ಅನೇಕ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಬೃಹತ್ ಉಚಿತ ಆರೋಗ್ಯ ಹಾಗೂ ಕಣ್ಣು ತಪಾಸಣಾ ಮತ್ತು ರಕ್ತದಾನ ಶಿಬಿರ ಭಾನುವಾರ ಯಶಸ್ವಿಯಾಗಿ ನೆರವೇರಿತು.

ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ರೈತ ಭವನ ಸಭಾಂಗಣದಲ್ಲಿ ಬೆಳಿಗ್ಗೆ 9.00ರಿಂದ ಮಧ್ಯಾಹ್ನ 2:೦೦ಗಂಟೆಯವರೆಗೆ ನಡೆದ ಶಿಬಿರದಲ್ಲಿ ನೂರಾರು ಜನರು ಭಾಗವಹಿಸಿ ವೈದ್ಯಕೀಯ ಸೇವೆಗಳ ಸದುಪಯೋಗ ಪಡೆದರು. ಲಯನ್ಸ್ ಕ್ಲಬ್ ಪುತ್ತೂರುದ ಮುತ್ತು ಇವರಿಂದ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು.

ಶಿಬಿರದಲ್ಲಿ ಸಾಮಾನ್ಯ ರೋಗ, ಎಲುಬು ಮತ್ತು ಕೀಲು ರೋಗ, ಕಿವಿ–ಮೂಗು–ಗಂಟಲು, ಕ್ಯಾನ್ಸರ್, ಕಣ್ಣು, ಹೃದಯ, ಸ್ತ್ರೀರೋಗ, ರಕ್ತದ ಒತ್ತಡ ಹಾಗೂ ಮಧುಮೇಹ ತಪಾಸಣೆ ಸೇರಿದಂತೆ ಹನ್ನೆರಡು ವಿಭಾಗಗಳಲ್ಲಿ ಪರಿಣಿತ ವೈದ್ಯರಿಂದ ಸೇವೆ ನೀಡಲಾಯಿತು. ಶಿಬಿರದಲ್ಲಿ ಭಾಗವಹಿಸಿದ ನಾಗರಿಕರಿಗೆ ಉಚಿತ ಔಷಧಿ ವಿತರಣೆ ಮಾಡಲಾಗಿದ್ದು, ಅಗತ್ಯವಿದ್ದವರಿಗೆ ಇಸಿಜಿ ತಪಾಸಣೆಯ ವ್ಯವಸ್ಥೆಯೂ ಕಲ್ಪಿಸಲಾಗಿತ್ತು. ರಕ್ತದಾನ ಶಿಬಿರದಲ್ಲಿ ಯುವಕರು ಹಾಗೂ ಮಹಿಳೆಯರು ಉತ್ಸಾಹದಿಂದ ಭಾಗವಹಿಸಿದರು.

ಕೆಎಂಸಿ ಆಸ್ಪತ್ರೆಯ ನುರಿತ ತಜ್ಞ ವೈದ್ಯರು ಶಿಬಿರದಲ್ಲಿ ವೈದ್ಯಕೀಯ ಸೇವೆ ನೀಡಿದರು. ತಪಾಸಣೆಗೆ ಹಾಜರಾದವರಿಗೆ ಕೆಎಂಸಿ ಆಸ್ಪತ್ರೆಯ ವಿಶೇಷ ಚಿಕಿತ್ಸಾ ರಿಯಾಯಿತಿ ಯೋಜನೆಗಳ ಕಾರ್ಡುಗಳನ್ನು ವಿತರಿಸಿ ಮಾಹಿತಿ ನೀಡಲಾಯಿತು.

ಶಿಬಿರ ಯಶಸ್ವಿಯಾಗಿ ನೆರವೇರಿಸಲು ಗ್ರಾಮ ಪಂಚಾಯತ್ ನರಿಮೊಗರು, ಪ್ರಾಥಮಿಕ ಆರೋಗ್ಯ ಕೇಂದ್ರ ಸರ್ವೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ (ರಿ.) ಕೆಮ್ಮಿಂಜೆ ವಲಯ, ಶ್ರೀ ದುರ್ಗಾ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ(ರಿ.) ನರಿಮೊಗರು, ನರಿಮೊಗರು ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳು ಮತ್ತು ಎಲ್ಲಾ ಅಂಗನವಾಡಿ ಕೇಂದ್ರಗಳು, ಒಡಿಯೂರು ಗ್ರಾಮವಿಕಾಸ ಯೋಜನೆ ಘಟಕ ಸಮಿತಿ ನರಿಮೊಗರು, ಯುವಕ ಮಂಡಲ ನರಿಮೊಗರು (ರಿ.) ಪುರುಷರಕಟ್ಟೆ, ವಿಕ್ರಂ ಯುವಕ ಮಂಡಲ ಶಾಂತಿಗೋಡು, ನೇತಾಜಿ ಯುವಕ ಮಂಡಲ ಕೂಡುರಸ್ತೆ, ಶ್ರೀ ವಿಷ್ಣು ಯುವಕ ಮಂಡಲ ಆನಡ್ಕ, ಅರಿವು ಕೇಂದ್ರ ನರಿಮೊಗರು ಗ್ರಾಮ ಪಂಚಾಯತ್, ನವಶಕ್ತಿ ಸ್ಪೋರ್ಟ್ಸ್ & ಆರ್ಟ್ಸ್ ಕ್ಲಬ್ ಕಲ್ಕಾರ್ ಮುಂಡೋಡಿ, ಶ್ರೀ ಮಹಾವಿಷ್ಣು ಸೇವಾ ಪ್ರತಿಷ್ಠಾನ (ರಿ.) ಆನಾಜೆ ವೀರಮಂಗಲ, ಸಾರ್ವಜನಿಕ ಗಣೇಶೋತ್ಸವ ಸಮಿತಿ (ರಿ.) ಪುರುಷರಕಟ್ಟೆ, ಫ್ರೆಂಡ್ಸ್ ಮಣಿಯ, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ನರಿಮೊಗರು ವಲಯ, ಬಿ.ಎಂ.ಎಸ್ ಆಟೋ ರಿಕ್ಷಾ ಚಾಲಕ ಮಾಲಕರ ಸಂಘ ಪುತ್ತೂರು ಘಟಕ, ಪುರುಷರಕಟ್ಟೆ ಶ್ರೀ ಶಾರದಾಂಬ ಭಜನಾ ಮಂದಿರ ಸೇರಾಜೆ, ಬಜಪ್ಪಲ ಗಣಪತಿ ಶೆಣೈ ಅಭಿಮಾನಿ ಬಳಗ ನರಿಮೊಗರು ಸಂಘ ಸಂಸ್ಥೆಗಳು ಸಹಕಾರ ನೀಡಿದರು.

ಈ ಸಂದರ್ಭದಲ್ಲಿ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಸಂಚಾಲಕರಾದ ಶ್ರೀಯುತ ಡಿ. ರಮೇಶ ನಾಯಕ್ ಮೈರಾ ಅವರು, ಪ್ರಸ್ತಾವನೆಯಲ್ಲಿ ಮನುಷ್ಯನ ಸಾಧನೆಗಳಿಗೆ ಶರೀರವೇ ದೇಗುಲ ಆರೋಗ್ಯವೇ ಆಧಾರ ಸ್ತಂಭಗಳು ಆದ್ದರಿಂದ ಆರೋಗ್ಯವನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಪುರುಷರಕಟ್ಟೆಯಲ್ಲಿ ಊರಿನ ಎಲ್ಲಾ 27 ಸಂಘ ಸಂಸ್ಥೆಗಳು ಜಾತಿ,,ಧರ್ಮ ಮತ್ತು ಪಕ್ಷ ಎಲ್ಲವನ್ನು ಬಿಟ್ಟು ಏಕತೆಯಿಂದ ಒಟ್ಟಿಗೆ ಸೇರುವುದು ಸಮಾಜದ ಆರೋಗ್ಯಕರ ಬೆಳವಣಿಗೆ. ಇದು ಮನುಷ್ಯನ ಆರೋಗ್ಯದ ಮಹತ್ವ ಮತ್ತು ಕಾಳಜಿಯನ್ನು ತೋರಿಸಿಕೊಡುತ್ತದೆ ಎಂದು ಅಭಿನಂದಿಸಿದರು. ಶಿಬಿರ ಯಶಸ್ವಿಗೊಳಿಸಲು ಸಹಕರಿಸಿದ ಕೆಎಂಸಿ ಆಸ್ಪತ್ರೆಯ ಆಡಳಿತ ಮಂಡಳಿ, ವೈದ್ಯರು, ಸಿಬ್ಬಂದಿ ವರ್ಗ, ಸ್ವಯಂಸೇವಕರು ಹಾಗೂ ಸಂಘ ಸಂಸ್ಥೆಗಳಿಗೆ ಅಭಿನಂದಿಸಿ ಕೃತಜ್ಞತೆ ವ್ಯಕ್ತಪಡಿಸಿದರು.

ಡಾ. ರಾಘವೇಂದ್ರ ಪ್ರಸಾದ್ ಅವರು ಮಾತನಾಡಿ, ಮೌಲ್ಯಯುತ ಮಾದರಿ ಜೀವನ ನಡೆಸಲು ನಾವು ನಮ್ಮ ಶರೀರವನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳುವುದು ಮುಖ್ಯ. ಇಂತಹ ಮಾಹಿತಿ, ಜಾಗೃತಿ ಹಾಗೂ ಅರಿವನ್ನು ಮೂಡಿಸುವಂತಹ ವೈದ್ಯಕೀಯ ಶಿಬಿರಗಳು ಊರಿನಲ್ಲಿ ವರ್ಷಕ್ಕೆ ಎರಡು ಬಾರಿಯಾದರೂ ನಡೆಯುತ್ತಿರಬೇಕು ಎಂದು ಶುಭವನ್ನು ಹಾರೈಸಿದರು.
ಡಾ. ಶಿವಪ್ರಕಾಶ್ ಮಾತನಾಡಿ ಇತ್ತೀಚಿಗಿನ ದಿನಗಳಲ್ಲಿ ವಯೋಮಿತಿ ಇಲ್ಲದೆ ಅಕಾಲಿಕ ಸಾವು-ನೋವುಗಳು ನಡೆಯುತ್ತಿರುವುದು ವಿಪರ್ಯಾಸ ಏನೇ ಇದ್ದರೂ ನಮ್ಮ ನಮ್ಮ ಜವಾಬ್ದಾರಿಗಳನ್ನು ಅರಿತು ಆರೋಗ್ಯದತ್ತ ಗಮನಹರಿಸಬೇಕು. ಯಾವುದೇ ಸಂದರ್ಭದಲ್ಲಿ ಆದರೂ ನೋವು ಅಥವಾ ಕಾಯಿಲೆಗಳು ಬಂದಾಗ ನುರಿತ ತಜ್ಞ ವೈದ್ಯರ ಸಲಹೆ ಸೂಚನೆಗಳನ್ನು ಪಡೆಯಬೇಕು ನಿರ್ಲಕ್ಷ ತೋರಬಾರದು. ಎಲ್ಲಾ ರೋಗಗಳಿಗೂ ಉತ್ತಮ ಚಿಕಿತ್ಸೆ ದೊರಕುತ್ತದೆ. ಅಸಡ್ಡೆ ತೋರಬಾರದು. ಇದರಿಂದ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಮುರಳೀಧರ ಪ್ರಭು, ಡಾ. ವಿಜಯಲಕ್ಷ್ಮಿ ನಾಯಕ್, ರವೀಂದ್ರ ನಾಯಕ್, ವಿಜಯ ಶೆಣೈ ಕೊಡಂಗೆ, ದ.ಕ.ಜಿಲ್ಲಾ ಕುಡಾಳ್ ದೇಶಸ್ಥ ಆಧ್ಯ ಗೌಡ್ ಬ್ರಾಹ್ಮಣ ಸಂಘದ ಸುರೇಂದ್ರ ನಾಯಕ್, ಉಮೇಶ ನಾಯಕ್, ಅತಿಥಿಗಳಾಗಿ ಡಾ. ಸುಶ್ಮಿತಾ ನಾಯಕ್, ಡಾ. ಬಾಲಸುಬ್ರಮಣ್ಯ ಭಟ್, ಪೃಥ್ವಿರಾಜ ನಾಯಕ್, ಡಾ. ಸುಜಯ ತಂತ್ರಿ, ಗಣೇಶ್ ಪ್ರಭು ಕಲ್ಕಾರ್, ಮಹೇಶ್ ಪ್ರಭು ಮಣಿಯ, ಲಕ್ಷ್ಮೀಶ ಪ್ರಭು ಕಲ್ಕಾರ್, ವಿಶ್ವನಾಥ ಮುಂಡೋಡಿ ಮುಂತಾದವರು ಉಪಸ್ಥಿತರಿದ್ದರು.

ಶಿಬಿರ ಗ್ರಾಮೀಣ ಪ್ರದೇಶದ ನಾಗರಿಕರಿಗೆ ಬಹುಮುಖ್ಯ ಆರೋಗ್ಯ ಸೇವೆಯನ್ನು ಒದಗಿಸಿದ ಯಶಸ್ವಿ ಸಾಮಾಜಿಕ ಕಾರ್ಯಕ್ರಮ ಎಂದು ಮೆಚ್ಚುಗೆಗೆ ಪಾತ್ರವಾಯಿತು.

ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ನವೀನ್ ಡಿ. ಮತ್ತು ಲಯನ್ಸ್ ಕ್ಲಬ್ ಅಧ್ಯಕ್ಷೆ ಶ್ರೀಮತಿ ವೇದಾವತಿಯವರು ಶುಭವನ್ನು ಕೋರಿದರು. ಶ್ರೀ ಸತೀಶ್ ಪ್ರಭು ಮಣಿಯ ಕಾರ್ಯಕ್ರಮ ನಿರೂಪಿಸಿದರು. ಜಯರಾಮ ಪೂಜಾರಿ ಅವರು ಧನ್ಯವಾದವಿತ್ತರು.





