AGM 2018
ಶ್ರೀ ಸಂಜಯ್ ಪ್ರಭು – ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾಗಿ ಆಯ್ಕೆ
ಶಿಕ್ಷಣ, ಸಾಮಾಜಿಕ, ಆರೋಗ್ಯ ಮತ್ತು ವಿಮಾ ಕ್ಷೇತ್ರದಲ್ಲಿ ಸುಮಾರು ಕಳೆದ 21 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ), ಮಂಗಳೂರು, ಇದರ ವಾರ್ಷಿಕ ಮಹಾಸಭೆಯು ತಾ. 15.07.2018 ರಂದು ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದ ಸಭಾಂಗಣದಲ್ಲಿ ಜರುಗಿತು. ಈ ಸಂಧರ್ಭದಲ್ಲಿ ಮುಂದಿನ 5 ವರ್ಷಗಳ ಅವಧಿಗೆ, ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಶ್ರೀ ಸಂಜಯ್ ಪ್ರಭು, ಇವರು ಸರ್ವಾನುಮತದಿಂದ ಆಯ್ಕೆಯಾದರು. ಕಾರ್ಯಾಧ್ಯಕ್ಷೆಯಾಗಿ ಡಾ. ಸುಚೇತ ಸುಧಾಕರ್ ಶೆಣೈ, ಕೋಶಾಧಿಕಾರಿಯಾಗಿ ಶ್ರೀ ಗಣೇಶ್ ಶೆಣೈ, ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರತ್ನಾಕರ್ ಸಾಮಂತ್ ಆರಿಸಲ್ಪಟ್ಟರು. ಗತಸಾಲಿನ ಅಧ್ಯಕ್ಷರಾದ ಶ್ರೀ ರಮೇಶ್ ನಾಯಕ್, ಮೈರಾ, ನೂತನ ಆಡಳಿತ ಮಂಡಳಿಗೆ ಶುಭ ಹಾರೈಸಿದರು. ಡಾ. ವಿಜಯಲಕ್ಷ್ಮೀ ನಾಯಕ್ ವಂದಿಸಿದರು.
ಶ್ರೀ ಸಂಜಯ್ ಪ್ರಭು – ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾಗಿ ಆಯ್ಕೆ
“ಸೇವಾ ಹಿ ಮಮ ಧರ್ಮ:”, ಎಂಬ ಘೋಷ ವಾಕ್ಯದೊಂದಿಗೆ ಕಳೆದ 21 ವರ್ಷಗಳಿಂದ ಸಮಾಜದ ಶಿಕ್ಷಣ, ಸಾಮಾಜಿಕ, ಆರೋಗ್ಯ, ಕೃಷಿ, ಧಾರ್ಮಿಕ, ಔದ್ಯೋಗಿಕ ಮತ್ತು ವಿಮಾ ಕ್ಷೇತ್ರದಲ್ಲಿ ಸಮಾಜದ ಅಭಿವೃದ್ಧಿಗೆ ಮತ್ತು ಸಂಘಟನೆಗೆ ಪೂರಕವಾದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಾಗಾರಗಳು, ಉಚಿತ ಸಾಮೂಹಿಕ ಬ್ರಹ್ಮೋಪದೇಶ, ಸಾಮೂಹಿಕ ಋಗುಪಾಕರ್ಮ, ಆರೋಗ್ಯ ತಪಾಸಣೆ, ಹಾಗೂ ಮಾಹಿತಿ ಶಿಬಿರಗಳ ಜತೆಗೆ ಸ್ವಾಮೀಜಿಯವರ ಆಶೀರ್ವಚನಗಳಂತಹ ಹಲವಾರು ಯಶಸ್ವೀ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಸಮಾಜದ ಹೆಮ್ಮೆಯ ಸಂಘಟನೆ ಹಾಗೂ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ), ಮಂಗಳೂರು, ಇದರ ವಾರ್ಷಿಕ ಮಹಾಸಭೆಯು ಪ್ರತಿಷ್ಢಾನದ ಅಧ್ಯಕ್ಷರಾದ ಶ್ರೀ ರಮೇಶ್ ನಾಯಕ್, ಮೈರಾ, ಇವರ ಅಧ್ಯಕ್ಷತೆಯಲ್ಲಿ ತಾ. 15.07.2018 ರಂದು ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದ ಸಭಾಂಗಣದಲ್ಲಿ ಜರುಗಿತು. ಈ ಸಂದರ್ಭದಲ್ಲಿ ಮುಂದಿನ 5 ವರ್ಷಗಳ ಅವಧಿಗೆ, ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಶ್ರೀ ಸಂಜಯ್ ಪ್ರಭು, ಇವರು ಸರ್ವಾನುಮತದಿಂದ ಆಯ್ಕೆಯಾದರು. ಕಾರ್ಯಾಧ್ಯಕ್ಷೆಯಾಗಿ ಡಾ. ಸುಚೇತ ಸುಧಾಕರ್ ಶೆಣೈ, ಕೋಶಾಧಿಕಾರಿಯಾಗಿ ಶ್ರೀ ಗಣೇಶ್ ಶೆಣೈ, ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರತ್ನಾಕರ್ ಸಾಮಂತ್ ಆರಿಸಲ್ಪಟ್ಟರು.
ನೇರಳಕೋಡಿ ಶ್ರೀ ಗೋಪಾಲ ಪ್ರಭು, ಇವರ ಪ್ರಾರ್ಥನೆಯೊಂದಿಗೆ, ಬರೆಪ್ಪಾಡಿ ಶ್ರೀ ನಾರಾಯಣ ಪ್ರಭುಗಳ ಶ್ರೀ ಗೋಪಾಲಕೃಷ್ಣ ಸ್ತುತಿಯೊಂದಿಗೆ ಸಭೆಯು ಆರಂಭಗೊಂಡಿತು. ಗತಸಾಲಿನ ಅಧ್ಯಕ್ಷರಾದ ಶ್ರೀ ರಮೇಶ್ ನಾಯಕ್, ಮೈರಾ, ಸ್ವಾಗತಿಸುತ್ತಾ, ‘ಹಿರಿಯರ ಸಾಧನೆಗಳನ್ನು ಸ್ಮರಿಸಿ, ಅವರ ಆದರ್ಶಗಳನ್ನು ಮೈಗೂಡಿಸಿ ಜೀವನದಲ್ಲಿ ಯಶಸ್ಸು ಸಾಧಿಸಬೇಕು. ನಮ್ಮ ಸಮಾಜದಲ್ಲಿನ ಯುವ ಪ್ರತಿಭೆಗಳನ್ನು ಬೆಳಕಿಗೆ ತರುವ ಎಲ್ಲಾ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು’ಎಂದು ಹೇಳುತ್ತಾ ‘ತಮ್ಮೆಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಸರ್ವಸದಸ್ಯರ ಮತ್ತು ಸಮಾಜ ಬಾಂಧವರ ತನು-ಮನ-ಧನದ ಜೊತೆಗೆ ಸಹಕಾರ, ಪ್ರೋತ್ಸಾಹ ಮತ್ತು ಪಾಲ್ಗೊಳ್ಳುವಿಕೆಯೇ ಕಾರಣ’ಎಂದು ಹೇಳಿದರು. ಕಳೆದ 5 ವರ್ಷಗಳ ಅವಧಿಯಲ್ಲಿ ತನ್ನ ಜೊತೆ ಆಡಳಿತ ಮಂಡಳಿಯಲ್ಲಿದ್ದು, ಸೇವೆ ಸಲ್ಲಿಸಿದ ಎಲ್ಲಾ ಪದಾಧಿಕಾರಿಗಳನ್ನು, ಸಹಕರಿಸಿದ ಸದಸ್ಯರನ್ನು ಮತ್ತು ಸಮಾಜ ಬಾಂಧವರನ್ನು ಎಲ್ಲರ ಪರವಾಗಿ ಹೃದಯಾಂತರಾಳದಿಂದ ಕೃತಜ್ಞತೆಯನ್ನು ಸಲ್ಲಿಸುತ್ತಾ ಅಭಿನಂದಿಸಿದರು. ಅವರೆಲರೂ ನೀಡಿದ ಸಹಕಾರ ಹಾಗೂ ಕೈಂಕರ್ಯಗಳ ಮಹತ್ವವನ್ನು ವ್ಯಕ್ತಪಡಿಸಿದರು.
ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಸಂಜಯ್ ಪ್ರಭುಗಳು ಮಾತನಾಡುತ್ತಾ, ಎಲ್ಲಾ ಸದಸ್ಯರು ಸಮಾಜ ಬಾಂಧವರು ಸಹಕಾರ ಹಾಗೂ ಪ್ರೋತ್ಸಾಹವನ್ನು ನೀಡಬೇಕಾಗಿ ವಿನಂತಿಸಿದರು. ಪ್ರತಿಷ್ಠಾನವನ್ನು ಸೇವಾ ಕಾರ್ಯದಲ್ಲಿ ಮತ್ತು ಸಂಘಟನೆಯ ಜೊತೆಗೆ ಸಮಾಜವನ್ನು ಅಭಿವೃದ್ಧಿ ಪಥದೆಡೆಗೆ ಕೊಂಡೊಯ್ಯುವ ಕಾರ್ಯ ಯೋಜನೆಗಳನ್ನು ಯಶಸ್ವಿಯಾಗಲು ಎಲ್ಲರ ತನು-ಮನ-ಧನದ ಜೊತೆಗೆ ಆಶೀರ್ವಾದವನ್ನು ಕೋರಿದರು.
ಗತಸಾಲಿನ ಅಧ್ಯಕ್ಷರಾದ ಶ್ರೀ ರಮೇಶ್ ನಾಯಕ್, ಮೈರಾ, ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಎಲ್ಲಾ ಸದಸ್ಯರಿಗೆ ಆತ್ಮೀಯವಾಗಿ ಅಭಿನಂದಿಸುತ್ತಾ, ಮುಂದಿನ 5 ವರ್ಷಗಳ ಅವಧಿಯಲ್ಲಿ ಪ್ರತಿಷ್ಠಾನದ ಎಲ್ಲಾ ಕಾರ್ಯಯೋಜನೆಗಳು ಯಶಸ್ವಿಯಾಗಿ ಕಾರ್ಯಗತಗೊಳ್ಳಲಿ, ಸೇವಾ ಕಾರ್ಯದಲ್ಲಿ ಪ್ರತಿಷ್ಠಾನವನ್ನು ಇನ್ನೂ ಹೆಚ್ಚಿನ ಎತ್ತರಕ್ಕೆ ಕೊಂಡೊಯ್ದು ಎಲ್ಲಾ ಕ್ಷೇತ್ರಗಳಿಗೆ ವಿಸ್ತರಿಸಲಿ, ಇದರ ಪ್ರತಿಫಲವಾಗಿ ನಮ್ಮ ಸಮಾಜವು ಸಂಘಟನೆ ಮತ್ತು ಅಭಿವೃದ್ಧಿಯ ಉತ್ತುಂಗ ಶಿಖರಕ್ಕೆ ತಲುಪಲಿ, ಇದರಿಂದಾಗಿ ಇತರ ಸಮಾಜಗಳಿಗೂ ಮಾದರಿಯಾಗಿ ರೂಪುಗೊಳ್ಳಲಿ’ ಎನ್ನುತ್ತಾ ಶ್ರೀದೇವರ ದಯೆಯೊಂದಿಗೆ ನಿಮ್ಮೆಲ್ಲರ ಆಶೀರ್ವಾದ ಅವರಿಗೆ ಇರಲಿ’ ಎಂದು ಶುಭ ಹಾರೈಸಿದರು.
ಸಮಾಜದ ಹಿರಿಯರಾದ ಕಿನ್ನಾಜೆ ನಾರಾಯಣ ನಾಯಕ್, ಮಾಧವ ಪ್ರಭು, ಗೋಪಾಲ್ ಸಾಮಂತ್, ಬಾಲಕೃಷ್ಣ ಪ್ರಭು ಕೆಂಚಪಾಲು, ಗೋಳಿಮಾರು ಭಾಸ್ಕರ ಪ್ರಭು ಮುಂತಾದವರು ಉಪಸ್ಥಿತರಿದ್ದರು.
2017-18ನೇ ಸಾಲಿನ ಕಾರ್ಯಕ್ರಮಗಳ ವಿವರವನ್ನು ಡಾ. ಸುಚೇತ ಸುಧಾಕರ್ ಶೆಣೈ ಮತ್ತು ಮುರಳೀಧರ ಪ್ರಭು ವಾಚಿಸಿದರು. ಕಳೆದ ಸಾಲಿನ ಪರಿಶೋಧಿತ ಲೆಕ್ಕ ಪತ್ರವನ್ನು ಕೋಶಾಧಿಕಾರಿ ಶ್ರೀ ಸಂಜೀವ ಸಾಮಂತ್, ಮರೋಳಿ ಮಂಡಿಸಿದರು. ಈ ಸಂದರ್ಭದಲ್ಲಿ ಮುಂದಿನ 5 ವರ್ಷಗಳ ಅವಧಿಗೆ 23 ಸದಸ್ಯರ ನೂತನ ಆಡಳಿತ ಮಂಡಳಿಯನ್ನು ಆಯ್ಕೆಗೊಳಿಸಲಾಯಿತು. ಆಯ್ಕೆಯಾದ ನೂತನ ಮಂಡಳಿಗೆ ಅಧಿಕಾರವನ್ನು ಸರ್ವಸದಸ್ಯರ ಮತ್ತು ಸಮಾಜ ಬಾಂಧವರ ಸಮಕ್ಷಮದಲ್ಲಿ ಹಸ್ತಾಂತರಿಸಲಾಯಿತು. ಸಭೆಯು ಕರತಾಡನದ ಮೂಲಕ ಅಭಿನಂದಿಸಿತು.
ಡಾ. ವಿಜಯಲಕ್ಷ್ಮೀ ನಾಯಕ್, ಗತಸಾಲಿನ ವರದಿಯನ್ನು ಮಂಡಿಸಿದರು, ಹಾಗೂ ಸಭೆಯ ಕೊನೆಯಲ್ಲಿ ವಂದಿಸಿದರು.
ನಿಕಟ ಪೂರ್ವ ಅಧ್ಯಕ್ಷರ ಕೃತಜ್ಞತಾ ನುಡಿ:
ಸುಮಾರು 22 ವರ್ಷಗಳ ಹಿಂದೆ ನಮ್ಮ ಸಮಾಜದ ಅಭಿವೃದ್ಧಿಯತ್ತ ಕಾಳಜಿ ಹೊಂದಿದ್ದ ಕೆಲವು ಸಮಾನ ಮನಸ್ಕರು ಹುಟ್ಟು ಹಾಕಿದ ಸಂಸ್ಥೆ- ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ(ರಿ).ಅಂಬೆಗಾಲಿಡುತ್ತಾ ಬಂದ ಈ ಸಂಸ್ಥೆ ಹಿರಿಯರ ಮಾರ್ಗದರ್ಶನ ಹಾಗೂ ಕಿರಿಯ ಅಮಿತೋತ್ಸಾಹದ ಚಟುವಟಿಕೆಗಳ ಪರಿಣಾಮವಾಗಿ ಅತೀ ಶೀಘ್ರವಾಗಿ ಬೆಳೆಯುತ್ತಾ ಬಂದಿದೆ. ಸಮಾಜದ ಯುವ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ಸಮಾಜದಲ್ಲಿ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದವರಿಗೆ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ನಮಗೆಲ್ಲರಿಗೂ ತಿಳಿದಂತಹ ವಿಷಯ.
ನಮ್ಮ ಕುಡಾಳ್ ದೇಶಸ್ಥ ಆದ್ಯಗೌಡ್ ಬ್ರಾಹ್ಮಣ ಸಮಾಜ ಸರಳತೆ, ಸಜ್ಜನಿಕೆ, ಸೌಜನ್ಯತೆ ಹಾಗೂ ಹೃದಯ ವೈಶಾಲ್ಯದಿಂದ ಕೂಡಿದ ಅನುಬಂಧ. ಇಲ್ಲಿ ಕಾನೂನುಗಳು, ನಿಯಮಾವಳಿಗಳೆಲ್ಲವೂ ಸಮಾಜ ಬಾಂಧವರ ಬಂಧುತ್ವ, ಬದ್ಧತೆ ಹಾಗೂ ಕಠಿಣ ಪರಿಶ್ರಮಗಳ ಎದುರು ನಗಣ್ಯ. ಧನಾತ್ಮಕ ದೃಷ್ಠಿಕೋನದಲ್ಲಿ ಚಿಂತಿಸುವಾಗ ಪ್ರತಿಷ್ಠಾನವು ಆರ್ಥಿಕತೆಗಾಗಿ, ಆರ್ಥಿಕ ವ್ಯವಸ್ಥೆಯನ್ನು ಹೊಂದಿರುವ ಸೌಹಾರ್ಧ ಸಹಕಾರಿ ಸಂಸ್ಥೆಯಲ್ಲ ಅಂತೆಯೇ ರಾಜಕೀಯ ಅಥವಾ ಇನ್ನಿತರ ಲಾಭದಾಯಕ ಸಂಘಟನೆ ಅಥವಾ ಪಕ್ಷವೂ ಅಲ್ಲ. ಇದೊಂದು ಸಮಾಜ ಸದಾ ನೆನಪಿನಲ್ಲಿಡುವಂತಹ ಹಾಗೂ ನಮ್ಮ ಪರಿಧಿಯಲ್ಲಿ ಸಮಾಜಕ್ಕೆ ನೀಡುವ ಸೇವಾಕಾರ್ಯಕ್ರಮಗಳಿಂದ ನಮ್ಮ ಹೆಜ್ಜೆಗುರುತುಗಳನ್ನು ಮುಂದಿನ ಪೀಳಿಗೆ ಗುರುತಿಸಲು ಸಿಗುವ ಒಂದು ಅವಕಾಶ. ಇಂತಹ ಅಪೂರ್ವ ಅವಕಾಶ ದೊರಕುವುದೇ ಗುರು ಹಿರಿಯರ ಆಶೀರ್ವಾದ ಮತ್ತು ನಮ್ಮ ಪೂರ್ವ ಜನ್ಮದ ಸುಕೃತ. ಇಂತಹ ಅವಕಾಶಗಳು ಸಮಾಜದ ಎಲ್ಲಾ ಸಜ್ಜನ ಬಾಂಧವರಿಗೂ ಸಿಗಲೆಂದು ನನ್ನ ಹಾರೈಕೆ. ನನ್ನಂತಹ ಸಾಮಾನ್ಯ ಕಾರ್ಯಕರ್ತನಿಗೂ ಇಂತಹ ಅವಕಾಶವನ್ನು ನೀಡಿರುವುದೇ ಸಮಾಜದ ಮನಸ್ಥಿತಿಯ ಪ್ರತಿಬಿಂಬ.
ಇಲ್ಲಿ ಪ್ರಮುಖವಾಗಿ ನಡೆಯುತ್ತಿರುವ ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಾಗಾರಗಳು, ವಿದ್ಯಾರ್ಥಿವೇತನ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳು ನಮ್ಮ ಸಮಾಜದ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿರುವ ರೀತಿ ನಮಗೆಲ್ಲರಿಗೂ ಧನ್ಯತಾಭಾವ ನೀಡಿ, ತನುಮನವನ್ನು ಉಲ್ಲಾಸಗೊಳಿಸುತ್ತಿರುವುದು ನಿಜಕ್ಕೂ ಸಂತೋಷದ ಅನುಭೂತಿಯಾಗಿದೆ. ಇದು ನಮ್ಮ ಯುವ-ಸಮುದಾಯವನ್ನು ಉಜ್ವಲ ಭವಿಷ್ಯತ್ತಿನತ್ತ ಮುನ್ನಡೆಸಿ ಪ್ರಕಾಶಿಸುವಂತೆ ಮಾಡುವುದರಲ್ಲಿ ಎರಡು ಮಾತಿಲ್ಲ. ಹಾಗಾಗಿ ಇದು ನಮ್ಮ ಬದುಕಿನ ಪರಮೋಚ್ಛ ಸೇವಾವಧಿಯೆಂದು ಪರಿಗಣಿಸುವ ಸಮಯ.
ಇದೇ ಜುಲೈ 15ರಂದು ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ(ರಿ)ದ ಸರ್ವ ಸದಸ್ಯರ ಮಹಾಸಭೆಯು ಜರಗಿದ್ದು ಅಧ್ಯಕ್ಷರಾಗಿ ರಾಜಕೀಯ, ಪತ್ರಿಕೋದ್ಯಮ, ಜಾಹಿರಾತು ಹಾಗೂ ವಿಮಾ ಮುಂತಾದ ಹತ್ತು ಹಲವು ಕ್ಷೇತ್ರಗಳಲ್ಲಿ ಸಂಘಟನಾ ಚತುರನಾಗಿ ಕಾರ್ಯನಿರ್ವಹಿಸಿರುವ ಶ್ರೀ ಸಂಜಯ್ ಪ್ರಭುರವರು ಸರ್ವಾನುಮತದಿಂದ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿರುವುದು ನಿಜಕ್ಕೂ ಅರ್ಹ ಹಾಗೂ ಅನುಭವಿ ನಾಯಕನಿಗೆ ಸಲ್ಲಬೇಕಾದ ಉನ್ನತ ಸ್ಥಾನ ಹಾಗೂ ಗೌರವ ಎಂದು ನನಗನ್ನಿಸುತ್ತಿದೆ. ನಿಮ್ಮ ಕಾರ್ಯಾವಧಿಯಲ್ಲಿ ನೀವು ಕೈಗೊಳ್ಳುವ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಸಹಕಾರ ನೀಡುವ ಆಶಯ ನನ್ನದು. ಅಷ್ಟೇ ಅಲ್ಲ ನಿಮ್ಮ ಸಾರಥ್ಯದಲ್ಲಿ ನಮ್ಮ ಪ್ರತಿಷ್ಠಾನವು ಖಂಡಿತ ಜನಪ್ರಿಯ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಕಾರಣವೇನೆಂದರೆ ನಿಮ್ಮೊಂದಿಗಿರುವ ಕಾರ್ಯಾಕಾರಿ ಸಮಿತಿಯ ಎಲ್ಲರೂ ಅತ್ಯಂತ ಅನುಭವಿಗಳು ಹಾಗೂ ಉತ್ಸಾಹಿಗಳು. ಇಂತಹ ಕಾರ್ಯಪಡೆಯನ್ನು ಪಡೆದಿರುವ ನೀವು ನಿಜಕ್ಕೂ ಭಾಗ್ಯಶಾಲಿಗಳು. ನಿಮ್ಮಲ್ಲಿ ಕಂಡುಬರುವ ಕೆಲವಾರು ನ್ಯೂನ್ಯತೆಗಳನ್ನು ಸರಿದೂಗಿಸಿಕೊಂಡು ಹೋಗಬಲ್ಲ ಸಾಮರ್ಥ್ಯ ನಿಮ್ಮ ತಂಡಕ್ಕಿರುವುದು ಸ್ತುತ್ಯಾರ್ಹ. ಹಾಗಾಗಿ ಇಡೀ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಮಾಜವು ನಿಮ್ಮಿಂದ ಅತ್ಯುನ್ನತ ಕಾರ್ಯಯೋಜನೆಯನ್ನು ನಿರೀಕ್ಷಿಸುತ್ತಿರುವುದು ಸಹಜ. ನಮ್ಮ ಸಮಾಜದ ಅಭಿವೃದ್ಧಿಗೆ ನೀವು ಸಿದ್ಧಪಡಿಸಿಕೊಂಡಿರುವ ಎಲ್ಲಾ ಕ್ರಿಯಾಯೋಜನೆಗಳು ಅಭೂತಪೂರ್ವ ಯಶಸ್ಸು ಪಡೆಯಲಿ ಎಂದು ಹಾರೈಸುತ್ತೇನೆ. ಶ್ರೀ ಸಂಜಯ್ ಪ್ರಭುರವರು ಇತರ ಕ್ಷೇತ್ರಗಳ ಜವಾಬ್ಧಾರಿಗಳಲ್ಲಿ ಕಾರ್ಯವ್ಯಸ್ಥರಾಗಿರುವುದರಿಂದ ನಮ್ಮ ಸಮಾಜದ ಕಾರ್ಯಚಟುವಟಿಕೆಗಳತ್ತ ಸೆಳೆಯುವುದು ನಮ್ಮ ಪದಾಧಿಕಾರಿಗಳಿಗಿರುವ ಸವಾಲು. ಹಾಗಾಗಿ ಎಲ್ಲಾ ಸದಸ್ಯರು ಅವರ ಕಾರ್ಯಯೋಜನೆಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುವುದೇ ಇದಕ್ಕಿರುವ ಒಂದೇ ಪರ್ಯಾಯ ಮಾರ್ಗ.
ಕಳೆದೈದು ವರ್ಷಗಳಲ್ಲಿ ಪ್ರತಿಷ್ಠಾನದ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಲು ಸಮಾಜ ಬಾಂಧವರು ನನಗೊಂದು ಅವಕಾಶವನ್ನಿತ್ತು ಹರಸಿದ್ದೀರಿ,ಆ ಕಾರ್ಯ ನಿರ್ವಹಣೆಯಲ್ಲಿ ನಾನೇನಾದರು ಯಶಸ್ವಿಯಾಗಿದ್ದೇನೆ ಎಂದು ನಿಮ್ಮ ಅಭಿಪ್ರಾಯವಾಗಿದ್ದಲ್ಲಿ ಅದಕ್ಕೆ ನಾನು ಕಾರಣಕರ್ತನಲ್ಲ.ನಮ್ಮ ಸಂಪೂರ್ಣ ಕಾರ್ಯಕಾರಿ ಸಮಿತಿಗೆ ಆ ಯಶಸ್ಸು ಸಲ್ಲತಕ್ಕದ್ದು ಎಂದು ವಿನಮ್ರಪೂರ್ವಕವಾಗಿ ತಿಳಿಸುತ್ತಿದ್ದೇನೆ. ನನ್ನ ಕಾರ್ಯಾವಧಿಯಲ್ಲಿ ನನಗೆ ಆಶೀರ್ವಾದ ಹಾಗೂ ಸಲಹೆ ಸೂಚನೆಗಳನ್ನಿತ್ತ ಎಲ್ಲಾ ಹಿರಿಯರಿಗೂ ಹಾಗೂ ಉತ್ಸಾಹದಿಂದ ಎಲ್ಲಾ ಚಟುವಟಿಕೆಗಳಲ್ಲಿ ನನ್ನೊಂದಿಗೆ ಜವಾಬ್ದಾರಿ ಹಂಚಿಕೊಂಡ ಯುವ ಕಾರ್ಯಕರ್ತರಿಗೆ ಹಾಗೂ ಕಿರಿಯರಿಗೆ ನನ್ನ ಮನ:ಪೂರ್ವಕ ವಂದನೆಗಳು. ನನ್ನ ಕಾರ್ಯಾವಧಿಯಲ್ಲಿ ಅನುಭವದ ಕೊರತೆಯಿಂದ ಹಾಗೂ ಕಣ್ತಪ್ಪಿನಿಂದ ನನ್ನಿಂದೇನಾದರು ಅಚಾತುರ್ಯಗಳು ಘಟಿಸಿದ್ದರೆ ನಿಮ್ಮ ಕ್ಷಮೆ ಇರಲಿ. ನಮ್ಮ ಸಮಾಜದ ಏಳಿಗೆಗೆ ನನ್ನ ಕೈಲಾದ ಕಿಂಚಿತ್ತು ಸೇವೆಯನ್ನು ‘ಬೃಹತ್’ ಎಂಬಂತೆ ಕೆಲವರು ಹೊಗಳಿದ್ದೀರಿ, ಬೆನ್ನು ತಟ್ಟಿದ್ದೀರಿ, ತಪ್ಪಿದಾಗ ತಿದ್ದಿದ್ದೀರಿ, ಟೀಕಿಸಿದ್ದೀರಿ ಹಾಗೂ ಸಲಹೆ ಸೂಚನೆಗಳನ್ನಿತ್ತಿದ್ದೀರಿ, ಹೀಗೆ ನಿಮ್ಮೆಲ್ಲರ ಸಹಕಾರದಿಂದಾಗಿ ಐದು ವರ್ಷ ಸಲೀಸಾಗಿ ಸಾಗಿ ಹೋಗಿದೆ. ಮುಂದಿನ ಐದು ವರ್ಷಗಳು ಶ್ರೀ ಸಂಜಯ್ ಪ್ರಭುರವರ ನೇತೃತ್ವದಲ್ಲಿ ಇನ್ನೂ ಹೆಚ್ಚಿನ ಹಾಗೂ ಉತ್ತಮ ರೀತಿಯ ಕಾರ್ಯ ಚಟುವಟಿಕೆಗಳು ಜರಗಲಿ ಎಂದು ಹಾರೈಸುತ್ತಾ, ಎಲ್ಲರಿಗೂ ಹೃದಯಾಂತರಾಳದ ನಮನಗಳನ್ನು ಸಲ್ಲಿಸುತ್ತಾ ನಾನು ವಿರಮಿಸುತ್ತಿದ್ದೇನೆ.
ರಮೇಶ್ ನಾಯಕ್. ಡಿ
ನಿಕಟಪೂರ್ವ ಅಧ್ಯಕ್ಷ
ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ(ರಿ)
ಪ್ರತಿಷ್ಠಾನದ ನೂತನ ಅಧ್ಯಕ್ಷರಿಗೆ ಅಭಿನಂದನೆಗಳು
ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಸಂಜಯ್ ಪ್ರಭುರವರಿಗೆ ಅಭಿನಂದನೆಗಳು.
ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಮಾಜದ ಉತ್ತರೋತ್ತರ ಅಭಿವೃದ್ಧಿಗೆ ನೀವು ಕಂಕಣ ಬದ್ಧರಾಗಿ ಮತ್ತು ಎಲ್ಲರಿಗೂ ಪ್ರೇರಕ ಶಕ್ತಿಯಾಗಿ ಎಂದು ಮನಪೂರ್ವಕವಾಗಿ ಹಾರೈಸುತ್ತೇನೆ.
ನಮ್ಮ ಸಮಾಜದ ಯುವ ಸಮುದಾಯದ ಮುಂದಾಳುಗಳಾಗಿ, ಸಮಾಜದ ಏಳಿಗೆಯ ಬಗ್ಗೆ ಸದಾ ಚಿಂತಕರಾಗಿರುವ ನಿಮ್ಮಿಂದ ಭವಿಷ್ಯತ್ತಿನಲ್ಲಿ ಮಹತ್ತರ ಸೇವಾ ಕಾರ್ಯವನ್ನು ನಿರೀಕ್ಷಿಸುತ್ತಿರುವ ಹಾಗೂ ಶುಭ ಹಾರೈಸುವ.